ನವದೆಹಲಿ[ಸೆ.12]: ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸಮಗ್ರ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಲು ಮುಂದಾಗಿದೆ. ಇದರ ಭಾಗವಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಗುಪ್ತಚರ ಮಾಹಿತಿ ಒದಗಿಸಲೆಂದೇ ಇರುವ ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್‌)ವು ದೇಶೀಯ ವಿಮಾನ ಪ್ರಯಾಣಿಕರ ಮಾಹಿತಿ ಒದಗಿಸುವಂತೆ ವಿಮಾನಯಾನ ಕಂಪನಿಗಳು, ವಿಮಾನಯಾನ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಸರ್ಕಾರದ ಈ ಕ್ರಮದಿಂದಾಗಿ ಒಬ್ಬ ವ್ಯಕ್ತಿ ಎಷ್ಟುಬಾರಿ ವಿಮಾನ ಪ್ರಯಾಣ ಮಾಡಿದ್ದಾನೆ, ಹೆಚ್ಚಾಗಿ ಯಾವ ಊರಿಗೆ ತೆರಳಿದ್ದಾನೆ ಎಂಬ ಮಾಹಿತಿ ಸರ್ಕಾರಕ್ಕೆ ಸುಲಭವಾಗಿ ಲಭಿಸುತ್ತದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಸಿಸಿಎ), ವಿಮಾನಯಾನ ಸಂಸ್ಥೆಗಳು, ವಿಮಾನಯಾನ ಸಚಿವಾಲಯ ಹಾಗೂ ನ್ಯಾಟ್‌ ಗ್ರಿಡ್‌ ನಡುವೆ ಆ.30ರಂದು ಸಭೆಯಲ್ಲಿ ಈ ಸೂಚನೆಯನ್ನು ನೀಡಲಾಗಿದೆ. ‘ಇಂತಹ ವಿವರ ಕೇಳಲು ನ್ಯಾಟ್‌ಗ್ರಿಡ್‌ಗೆ ಕಾನೂನಿನಡಿ ಅವಕಾಶ ಇದೆ. ಹೀಗಾಗಿ ನಾವು ನಿರಾಕರಿಸಲು ಆಗುವುದಿಲ್ಲ’ ಎಂದು ವಿಮಾನಯಾನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.