ಹೈದರಾಬಾದ್[ಸೆ.08]: ಮೂಕಪ್ರಾಣಿಗಳ ಮೇಲಿನ ದೌರ್ಜನ್ಯದ ವರದಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಪ್ರಾಣಿಗಳನ್ನು ಹೊಡೆದು ಬಡಿದು ಹಿಂಸಿಸುವುದು ಮಾತ್ರವಲ್ಲದೇ, ಅವುಗಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳೂ ಸದ್ದು ಮಾಡುತ್ತವೆ. ಸದ್ಯ ಹೈದರಾಬಾದ್ ನಲ್ಲಿ ನಾಯಿಯ ಮೇಲೆ ವ್ಯಕ್ತಿಯೊಬ್ಬ ನಡೆಸಿದ ದೌರ್ಜನ್ಯದ ದೃಶ್ಯಗಳು ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಹೈದರಾಬಾದ್ ನ ಶಾಲೆಯೊಂದರ ವಾಚ್ ಮ್ಯಾನ್ ನಾಯಿಯೊಂದನ್ನು ತನ್ನ ಬೈಕ್ ಗೆ ಕಟ್ಟಿ ಹಾಕಿ ಸಿಕಂದರಾಬಾದ್ ನ ರಸ್ತೆಯೊಂದರಲ್ಲಿ ಸುಮಾರು 1ಕಿ. ಮೀಟರ್ ದೂರ ಎಳೆದೊಯ್ದಿದ್ದಾನೆ. ಈ ಘಟನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಯಿ ಗಂಭೀರ ಗಾಯಗೊಂಡಿರುವುದು ಕಾಣಬಹುದಾಗಿದೆ.

ಪ್ರಾಣಿ ದಯಾ ಸಂಘದ ಕಾರ್ಯಕರ್ತ ವದಲ್ ಮಣಿ ಮೂರ್ತಿ ಎಂಬವರು ಘಟನೆಯ ದೃಶ್ಯಗಳನ್ನು ಶೇರ್ ಮಾಡಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ವರದಿಯನ್ವಯ ಈ ಬೀದಿ ನಾಯಿ ಇಲ್ಲಿನ ಪಿಜಿ ರಸ್ತೆಯಲ್ಲಿರುವ ವೆಸ್ಲಿ ಬಾಯ್ಸ್ ಸ್ಕೂಲ್ ಪರಿಸರದಲ್ಲಿ ಓಡಾಡಿಕೊಂಡಿತ್ತು. ಹೀಗಾಘಿ ಶಾಲೆಯ ಪ್ರಾಂಶುಪಾಲರು ವಾಚ್ ಮನ್ ಬಳಿ ಇದನ್ನು ಎಲ್ಲಾದರೂ ದೂರಕ್ಕೊಯ್ದು ಬಿಟ್ಟು ಬರುವಂತೆ ಸೂಚಿಸಿದ್ದರು. ಹೀಗಾಗಿ ವಚ್ ಮನ್ ಇದನ್ನು ತನ್ನ ಬೈಕ್ ಗೆ ಕಟ್ಟಿ 1ಕಿ. ಮೀಟರ್ ದೂರ ಎಳೆದೊಯ್ದಿದ್ದ ಎಂದು ತಿಳಿದು ಬಂದಿದೆ.