ಬಾಬಾ ಬುಡನ್‌ಗಿರಿ: ಹಿಂದು, ಮುಸ್ಲಿಂಗೆ ಪ್ರತ್ಯೇಕ ಅರ್ಚಕರು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Sep 2018, 4:06 PM IST
Does Separate Priests Allot For Hindu And Muslim Devotees in Baba Budan Giri
Highlights

ಬಾಬಾ ಬುಡನ್ ಗಿರಿಯಲ್ಲಿ ಹೈಕೋರ್ಟ್‌, ಹಿಂದು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಅರ್ಚಕರನ್ನು ನೇಮಿಸುವ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಬೆಂಗಳೂರು :  ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿವಿಧಾನ ನೆರವೇರಿಸುವ ವಿವಾದವನ್ನು ಬಗೆಹರಿಸಿ, ಕೋಮು ಸೌಹಾರ್ದತೆ ಏರ್ಪಡಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಹಿಂದು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಅರ್ಚಕರನ್ನು ನೇಮಿಸುವ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ದತ್ತಾತ್ರೇಯ ಪೀಠದ ಪೂಜೆ ಮಾಡಲು ಮುಸ್ಲಿಂ ಮೌಲ್ವಿ ಸೈಯದ್‌ ಗೌಸ್‌ ಮೊಹಿದ್ದೀನ್‌ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಾರ್ಚ್ 19ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಮಿತಿ ಸಲ್ಲಿಸಿರುವ ಅರ್ಜಿ ಗುರುವಾರ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ವಕೀಲ ಜಗದೀಶ್‌ ಬಾಳಿಗ ವಾದಿಸಿ, ದತ್ತಪೀಠ ಗರ್ಭಗುಡಿ ಪ್ರವೇಶಿಸಲು ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್‌ ಗೌಸ್‌ ಮೊಹಿದ್ದೀನ್‌ ಅವರನ್ನು ಸರ್ಕಾರ ನೇಮಿಸಿದೆ. ಆದರೆ, ಹಿಂದು ಪೂಜೆ ವಿಧಾನಗಳನ್ನು ನೆರವೇರಿಸುವ ಪದ್ಧತಿ ಅವರಿಗೆ ಗೊತ್ತಿಲ್ಲ. ತಮ್ಮ ಪದ್ಧತಿಯಂತೆ ಪೂಜೆ ಮಾಡುವ ಹಕ್ಕು ಹಿಂದು ಧರ್ಮದವರು ಹೊಂದಿದ್ದಾರೆ. ದತ್ತಪೀಠದಲ್ಲಿ ಹಿಂದು ಅರ್ಚಕರನ್ನು ನೇಮಿಸಲು ಕೋರಿದ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎಂದು ದೂರಿದರು.

ಸರ್ಕಾರದ ಆದೇಶವನ್ನು ಓದಿದ ನಂತರ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸರ್ಕಾರದ ಈ ಆದೇಶವು ಒಂದು ಕೋಮಿನವರ ಪರವಾಗಿದೆ. ಹಾಗೆಯೇ, ಸರ್ಕಾರ ನೇಮಿಸಿರುವ ವ್ಯಕ್ತಿಯೇ ದತ್ತಪೀಠಕ್ಕೆ ಭೇಟಿ ನೀಡುವ ಎರಡು ವಿಭಿನ್ನ ಕೋಮಿನವರಿಗೆ ಪೂಜಾ ವಿಧಾನ ನೆರವೇರಿಸುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಲಕ್ಷಣಗಳು ಕಂಡುಬರುತ್ತಿದೆ ಎಂದು ಮೌಖಿಕವಾಗಿ ಕಳಕಳ ವ್ಯಕ್ತಪಡಿಸಿದರು.

ದತ್ತಪೀಠದಲ್ಲಿ ಕೋಮು ಸೌಹಾರ್ದತೆ ಮೂಡಿಸುವ ಅಗತ್ಯವಿದೆ. ಸರ್ಕಾರದ ನಿರ್ಧಾರಗಳು ಕೋಮು ಸೌಹಾರ್ದತೆ ಕಾಪಾಡುವಂತಿರಬೇಕು. ಬದಲಾಗಿ ಕೋಮು ಸಾಮರಸ್ಯ ಕದಡುವಂತಿರಬಾರದು. ಹಿಂದು ಧಾರ್ಮಿಕ ವಿಧಿ ವಿಧಾನಗಳು ಬಗ್ಗೆ ಬೇರೆಯವರಿಗೆ ತಿಳಿದಿರುವುದಿಲ್ಲ. ಇದರಿಂದ ಎರಡೂ ಕೋಮಿನವರಿಗೂ ಮುಜುಗರವಾಗುತ್ತದೆ. ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶ ಸರ್ಕಾರಕ್ಕೆ ಇದ್ದರೆ ಹಿಂದು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಅರ್ಚಕರು ಮತ್ತು ಮುಜಾವರ್‌ ನೇಮಿಸಬೇಕು. ಹಾಗೆಯೇ, ಪೂಜೆಗೆ ಪ್ರತ್ಯೇಕ ಸಮಯ ನಿಗದಿಪಡಿಸಬಹುದು ಎಂದು ಅಭಿಪ್ರಾಯಪಟ್ಟಿತು.

ನಂತರ ಆಯಾ ಹಿಂದು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಅರ್ಚಕರನ್ನು ನೇಮಿಸುವುದು ಸಂಬಂಧ ಆದೇಶವನ್ನು ಮಾರ್ಪಡಿಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಈ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ನೀಡುವಂತೆ ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದಿನೇಶ್‌ ರಾವ್‌ ಅವರಿಗೆ ನ್ಯಾಯಮೂರ್ತಿಗಳು ತಿಳಿಸಿದರು. ಇದಕ್ಕೆ ಉತ್ತರಿಸಿದ ದಿನೇಶ್‌ ರಾವ್‌ ಅವರು, ನ್ಯಾಯಾಲಯ ವ್ಯಕ್ತಪಡಿಸಿರುವ ಮೌಖಿಕ ಸಲಹೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ದತ್ತಪೀಠದಲ್ಲಿ ಪೂಜಾ ವಿಧಾನ ನೆರವೇರಿಸುವ ಕುರಿತು ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ಸಂಬಂಧ ಯಾವುದೇ ಕ್ರಮ ಜರುಗಿಸದಂತೆ ಸರ್ಕಾರಕ್ಕೆ ನೀಡಿದ್ದ ಮಧ್ಯಂತರ ನಿರ್ದೇಶನವನ್ನು ಸೆ.26ಕ್ಕೆ ವಿಸ್ತರಿಸಿ ವಿಚಾರಣೆ ಮುಂದೂಡಿತು.

loader