ನವದೆಹಲಿ (ಸೆ. 09): ರಾಹುಲ್ ಗಾಂಧಿಯವರು ನಿರ್ವಹಿಸಬಹುದಾದ ರಾಜಕೀಯ ತಂತ್ರಗಾರಿಕೆಯ ಕ್ರಾಂತಿಯೊಂದಿದೆ. ಆ ಮೂಲಕ ಅವರು 2019 ರ ಚುನಾವಣೆಯ ಇಡೀ ಚಿತ್ರಣವನ್ನೇ ಬದಲಿಸಿಬಿಡಬಹುದಾಗಿದೆ.

ವಾಡಿಕೆಯ ರಾಜಕೀಯ ತಂತ್ರಗಾರಿಕೆಗಳು ಸದ್ಯದ ವಾತಾವರಣದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ. ಏಕೆಂದರೆ ನರೇಂದ್ರ ಮೋದಿಯವರಿಗೆ ಇರುವ ಜನಸಮೂಹವನ್ನು ಸೆಳೆಯುವ ಪ್ರಚಂಡ ಮಾತುಗಾರಿಕೆಯ ಸಾಮರ್ಥ್ಯಕ್ಕೆ ಎದುರಾಳಿಗಳಿಲ್ಲ ಮತ್ತು ಅವರ ಪಕ್ಷವು ಅಧಿಕಾರದಲ್ಲಿರುವುದರಿಂದ ಮೇಲುಗೈಯನ್ನು ಪಡೆದಿದೆ.

2019 ರ ಚುನಾವಣೆಯನ್ನು ಮೋದಿ ವಿರುದ್ಧ ರಾಹುಲ್ ಪರೀಕ್ಷೆ ಎಂದು ನೋಡುವುದು ಮೂರ್ಖತನವಾಗುತ್ತದೆ. ಕಾಂಗ್ರೆಸ್ ಪಕ್ಷವು ಈ ಅಸ್ವಾಭಾವಿಕವಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸವಾಲನ್ನು ಎದುರಿಸಲು ಅಸ್ವಾಭಾವಿಕವಾದ ಹೆಜ್ಜೆಯನ್ನು ಇರಿಸಬೇಕು.

ಸ್ವಲ್ಪ ಎದೆಗಾರಿಕೆ ಮತ್ತು ಸ್ವಲ್ಪ ದೂರದೃಷ್ಟಿಯನ್ನು ಹೊಂದಿದರೆ ರಾಹುಲ್ ಎಲ್ಲವನ್ನೂ ತಮ್ಮ ಪರವಾಗಿ ತಿರುಗಿಸಿಕೊಳ್ಳಬಹುದು. ಮೊದಲನೆಯ ಹೆಜ್ಜೆಯೆಂದರೆ, ತಮಗೆ ಸರ್ಕಾರದಲ್ಲಿ ಅನುಭವವಿಲ್ಲವೆಂಬ ಕುಂದಿದೆ ಮತ್ತು ಯುವಕ ಹಾಗೂ ವಂಶಾಡಳಿತದ ಹಣೆಪಟ್ಟಿ ಇದೆ ಎಂಬುದನ್ನು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಳ್ಳುವುದು. ಮೋದಿಯವರು ಇದಕ್ಕಾಗಿಯೇ ಅವರನ್ನು ಶಾಜಾದಾ ಮತ್ತು ಪಪ್ಪು ಎಂದು ಅಪಹಾಸ್ಯ ಮಾಡುತ್ತಿರುವುದು.

ಈ ಹಿನ್ನೆಡೆಗಳನ್ನು ಬೆಂಕಿಯು ಗುಳುವ ಭಾಷಣ ಮಾಡುವುದರಿಂದಾಗಲಿ, ಒಂದೆರಡು ವಿದೇಶ ಯಾತ್ರೆ ಕೈಗೊಳ್ಳುವುದರಿಂದಾಗಲಿ ಮತ್ತು ಆಧುನಿಕ ಮಾರಕಟ್ಟೆ ತಂತ್ರಜ್ಞಾನದಿಂದಾಗಲಿ ಪರಿಹರಿಸಿಕೊಂಡು ಬಿಡುತ್ತೇನೆ ಎಂದು ಕಲ್ಪನೆ ಮಾಡಿಕೊಳ್ಳುವುದು ಅಧಿಕಾರ ಪ್ರಲೋಭನೆಗಳಿಗೆ ಬಲಿಯಾದಂತೆಯೇ. ಈ ತಪ್ಪುಗಳನ್ನು ಮಾಡುವುದಕ್ಕೆ ಒತ್ತಡಗಳಿವೆ, ಎದೆಗಾರಿಕೆಯಿಂದ ಅದನ್ನು ತಡೆಯಬೇಕು. ಕಾಯುವುದರಿಂದ ತನಗೇನೂ ನಷ್ಟವಿಲ್ಲ ಎಂಬುದನ್ನು ಅರಿಯುವುದಕ್ಕೆ ಅವರಿಗೆ ದೂರದೃಷ್ಟಿಬೇಕು.

ಕಾಲವು ಅವರ ಪರವಾಗಿದೆ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿ, ಆದರೆ ಔಪಚಾರಿಕವಾಗಿ ತಾವು ಪ್ರಧಾನಿ ಪದವಿಯ ಸಂಭಾವ್ಯ ಅಭ್ಯರ್ಥಿ ಎಂಬುದರಿಂದ ಹಿಂದೆ ಸರಿಯಲಿ. ಸಾರ್ವಜನಿಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವದ ಕೊರತೆ ಇದೆ ಎಂದು ಸಂದೇಹಪಡುವ ನಾಯಕರುಗಳಿರುವ ಪ್ರತಿಪಕ್ಷಗಳಲ್ಲಿ ಇದು ಬಲ ಹೆಚ್ಚಿಸುತ್ತದೆ.

ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಸ್ವೀಕಾರಾರ್ಹತೆಯು ಹೆಚ್ಚುತ್ತದೆ ಮತ್ತು ಪ್ರತಿಪಕ್ಷಗಳ ಏಕತೆ ಸಾಧಿಸುವುದು ಸುಲಭವಾಗುತ್ತದೆ. ಒಂದು ವೇಳೆ ಚುನಾವಣೆಯಲ್ಲಿ ಮೈತ್ರಿ ಕೂಟವು ಬಹುಮತ ಸಾಧಿಸಿದರೆ, ಪ್ರತಿಪಕ್ಷಗಳ ಈ ಮೈತ್ರಿಕೂಟದ ಅಂಗಪಕ್ಷವಾಗಿ ಕಾಂಗ್ರೆಸ್ ವಿಜೇತರ ಎಲ್ಲ ಲಾಭವನ್ನು ಗಿಟ್ಟಿಸಿಕೊಳ್ಳುತ್ತದೆ.

ಒಂದು ವೇಳೆ ಕಾಂಗ್ರೆಸ್ ಪಕ್ಷವೇ ಸಾಕಷ್ಟು ಸ್ಥಾನಗಳನ್ನು ಗಳಿಸಿಕೊಂಡರೆ ನ್ಯಾಯಬದ್ಧವಾಗಿ ಪ್ರಧಾನಿ ಹುದ್ದೆಗೆ ಹಕ್ಕುದಾರ ಆಗುವುದಿಲ್ಲವೆ? ಇಂಥ ಸನ್ನಿವೇಶದಲ್ಲಿ ರಾಹುಲ್ ಗಾಂಧಿಯವರು ಅತ್ಯಂತ ವಿವೇಕದ ನಿರ್ಧಾರವನ್ನು ಕೈಗೊಳ್ಳಬೇಕು. ಉನ್ನತ ಹುದ್ದೆಗೆ ಅವರು ಬೇರೊಬ್ಬ ಕಾಂಗ್ರೆಸ್ ನಾಯಕನ ಹೆಸರನ್ನು ಸೂಚಿಸಬೇಕು ಮತ್ತು ಸ್ವತಃ ತಾವೇ ಆಡಳಿತದ ಅನುಭವವನ್ನು ಪಡೆಯುವುದಕ್ಕಾಗಿ ಸಚಿವರಾಗಿ ಸಂಪುಟ ಸೇರಬೇಕು. ಇದರಿಂದ ಅವರ ರಾಜಕೀಯ ಕೀರ್ತಿ ಗಗನಕ್ಕೇರುವುದು.

ಇಂದಿರಾ ಗಾಂಧಿಯವರು ಲಾಲ್‌ಬಹಾದ್ದೂರ್ ಶಾಸ್ತ್ರಿಯವರ ಸಂಪುಟದಲ್ಲಿ ಸಚಿವರಾಗಿದ್ದರು ಮತ್ತು ಅದರಿಂದಾಗಿ ಅವರು ಆಡಳಿತದ ಉತ್ತಮ ಅನುಭವ ಪಡೆದರು. (ಆ ಸಮಯದಲ್ಲಿ ಅವರಿಗೆ ಅದು ಇಷ್ಟವಿರಲಿಲ್ಲ.) ರಾಹುಲ್ ಗಾಂಧಿಯವರು ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಕೊಲ್ಲಬಹುದು. ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯುವುದರಿಂದ ಅವರಿಗೆ ವಿವೇಕದ ಪ್ರಭಾವಳಿ ದಕ್ಕುವುದು.

ನಿಂದನೆಗೆ ಒಳಗಾಗದ ವ್ಯಕ್ತಿತ್ವವುಳ್ಳ ಒಬ್ಬ ಕಾಂಗ್ರೆಸ್ಸಿಗ ಪ್ರಧಾನಿ ಅಭ್ಯರ್ಥಿಯಾಗಿ ಮುಂದೆ ಬಂದರೆ ಯಾವುದೇ ಮೈತ್ರಿಕೂಟದಲ್ಲಿ ಅವರ ಪಕ್ಷದ ಬಲವು ಬಲಿಷ್ಠವಾಗುವುದು. ಯೋಗ್ಯ ವ್ಯಕ್ತಿಯನ್ನು ಆಯ್ಕೆಮಾ ಡುವುದು ಒಂದು ಪಕ್ಷಕ್ಕೆ ಸಮಸ್ಯೆ. ಆದರೆ ರಾಹುಲ್ ಗಾಂಧಿಯವರು ಅಧ್ಯಕ್ಷರಾಗಿರುವ ಪಕ್ಷವು ಇದನ್ನು ಸುಲಭವಾಗಿ ಮಾಡಬಹುದಾಗಿದೆ.

ಇಲ್ಲಿ ಎರಡು ಉದಾಹರಣೆಗಳನ್ನು ಕೊಡಬಹುದಾಗಿದೆ, ಪಿ.ಚಿದಂಬರಂ ಅನಧಿಕೃತವಾಗಿ ಪ್ರಧಾನಿ ಹುದ್ದೆಗೆ ಪ್ರಮುಖರೆಂದು ಹೇಳಲಾಗುತ್ತಿದೆ. ಆದರೆ ಅವರು ಎಲ್ಲವನ್ನೂ ಗಬ್ಬೆಬ್ಬಿಸಿಬಿಡಬಲ್ಲರು. ಒಂದು ಸಂಗತಿ, ಅವರ ಪ್ರಧಾನಿ ಅರ್ಹತೆಯಗಳ ಬಗ್ಗೆ ‘ಗುಸುಗುಸು’ 2012 ರಷ್ಟು ಹಿಂದೆಯೇ ದೊಡ್ಡ ಹೆಸರಿನ ದಿ ಇಕಾನಾಮಿಸ್ಟ್ ಸೇರಿದಂತೆ ‘ವಿದೇಶಿ ಮಾಧ್ಯಮಗಳಲ್ಲಿ’ ಬರುವಂ ತೆ ಯೋಜಿಸಲಾಗಿತ್ತು.

ಈ ಕುರಿತು ಕಾಂಗ್ರೆಸ್ ಪಕ್ಷವು ಆಂತರಿಕ ತನಿಖೆಗೆ ಆದೇಶ ಕೂಡ ನೀಡಿತ್ತು. ಅವರ ವಿರುದ್ಧ ಇರುವ ಇನ್ನೊಂದು ಬಹುಮುಖ್ಯ ಅಂಶವೆಂದರೆ ಸರಿಯಾಗಿಯೋ, ಇಲ್ಲ ತಪ್ಪಾಗಿಯೋ ಅವರ ಹೆಸರು ಭ್ರಷ್ಟಾಚಾರದ ಪ್ರಕರಣದಲ್ಲಿ ಸೇರ್ಪಡೆಯಾಗಿದೆ. ನಕಾರಾತ್ಮಕ ಆಸ್ತಿಗೆ ಅವರ ಪುತ್ರನೂ ಕೊಡುಗೆ ನೀಡಿದ್ದಾನೆ. ಚಿದಂಬರಂ ಸಮರ್ಥ, ವಿದ್ಯಾವಂತ ಮತ್ತು ಆಧುನಿಕತೆ ಇರುವವರು. ಆದರೆ ಅವರು ಜನಪ್ರಿಯರಲ್ಲ. ಅವರ ವ್ಯಕ್ತಿತ್ವವೇ ಅವರ ಶತ್ರು.

ಇನ್ನೊಂದೆಡೆ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಪದವಿಗೆ ಅತ್ಯುತ್ತಮ ಅಭ್ಯರ್ಥಿ. ಇಂದಿನ ಸಾರ್ವಜನಿಕ ಜೀವನದಲ್ಲಿ ಅತ್ಯಧಿಕ ಅನುಭವವಿರುವ ರಾಜಕಾರಣಿ. ತಮ್ಮ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅವರು 40 ವರ್ಷಗಳಿಗೂ ಮಿಗಿಲಾಗಿ ಸಚಿವ ಪದವಿಗಳನ್ನು ನಿಭಾಯಿಸಿದ್ದಾರೆ. ಅವರು ನಿರ್ವಹಿಸಿದ ಖಾತೆಗಳಲ್ಲಿ ಶಿಕ್ಷಣ, ಪಂಚಾಯ್ತಿರಾಜ್, ಉದ್ಯಮ, ಕಂದಾಯ, ಸಾರಿಗೆ, ಗೃಹಖಾತೆಗಳು ಸೇರಿವೆ. ಕಿರೀಟಪ್ರಾಯ ಘನತೆಯೆಂದರೆ ಅವರು ಇವೆಲ್ಲವನ್ನೂ ಯಾವುದೇ ಭ್ರಷ್ಟಾಚಾರದ ಹಗರಣಗಳಿಲ್ಲದೆ ನಿಭಾಯಿಸಿರುವುದು. ಇದು ವಿಶಿಷ್ಟ ದಾಖಲೆಯಾಗಿರಲೇಬೇಕು.

ಭಾರತದ ಜಟಿಲ ರಾಜಕಾರಣದಲ್ಲಿ ಖರ್ಗೆಯವರು ಇನ್ನೆರಡು ಅರ್ಹತೆಗಳನ್ನು ಹೊಂದಿದ್ದಾರೆ. ಅವರು ದಕ್ಷಿಣ ಭಾರತದವರು ಮತ್ತು ಹಿಂದಿಯನ್ನು ಸ್ವಭಾಷೆ ಎಂಬಂತೆ ಮಾತನಾಡುತ್ತಾರೆ. ಅವರು ಲೋಕಸಭೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಿದ ಪ್ರತಿಪಕ್ಷದ ನಾಯಕನ ಸ್ಥಾನವು ಆಳುವ ಪಕ್ಷದವರ ಮೆಚ್ಚುಗೆಗೂ ಪಾತ್ರವಾಗಿದೆ. ಹೆಚ್ಚುವರಿಯಾಗಿ ಅವರು ಪರಿಶಿಷ್ಟ ಜಾತಿಗೆ ಸೇರಿದವರು, ಹೀಗಿದ್ದೂ ಅವರು ಎಂದಿಗೂ ಜಾತಿಯನ್ನು ಅಸ್ತ್ರವಾಗಿ ಬಳಸಿದವರಲ್ಲ.

ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನ ಖರ್ಗೆಯವನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದರೆ, ರಾಹುಲ್ ಗಾಂಧಿಯವರು ಹಿಂಬದಿಯಲ್ಲಿ ಆತ್ಮವಿಶ್ವಾಸದಿಂದ ಕಾಯುತ್ತಿದ್ದರೆ ಅದು 2019 ರ ಚುನಾವಣೆಯಲ್ಲಿ ಸಮರ್ಥವಾದ ಪಡೆಯಾಗುವುದು. ಒಂದೇ ಪ್ರಶ್ನೆಯೆಂದರೆ ಈ ಸದಾವಕಾಶವನ್ನು ಬಾಚಿಕೊಳ್ಳಲು ರಾಹುಲ್ ಗಾಂಧಿಯವರು ಎದೆಗಾರಿಕೆಯನ್ನು ಹೊಂದಿದ್ದಾರೆಯೇ ಮತ್ತು ದೂರದೃಷ್ಟಿಯನ್ನು ಹೊಂದಿದ್ದಾರೆಯೇ ಎಂಬುದು. 

- ಟಿ ಜೆ ಎಸ್ ಜಾರ್ಜ್