ಬೆಂಗಳೂರು[ಜೂ.16]: ಕಾರ್ಯನಿರತ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಕರೆ ಮೇರೆಗೆ ಜೂ.17ರಂದು ದೇಶಾದ್ಯಂತ ಹೊರ ರೋಗಿ ಸೇವೆ ಸ್ಥಗಿತಗೊಳಿಸಿ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ. ಅದರಂತೆ ಸೋಮವಾರ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ ಹಾಗೂ ಪ್ರಯೋಗಾಲಯಗಳ ಸೇವೆ ಸ್ಥಗಿತಗೊಳ್ಳಲಿದೆ. ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆ ಬಂದ್‌ ಮಾಡಲು ನಿರ್ಧರಿಸಿದ್ದು, ರೋಗಿಗಳು ಪರದಾಡಬೇಕಾದ ಸಂದರ್ಭ ನಿರ್ಮಾಣವಾಗುವ ಸಾಧ್ಯತೆಯಿದೆ.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐದು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಆರಂಭವಾದ ವೈದ್ಯರ ಮುಷ್ಕರ ದೇಶಾದ್ಯಂತ ವ್ಯಾಪಿಸಿದ್ದು, ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸುವಂತೆ ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಶುಕ್ರವಾರ ಸಾಂಕೇತಿಕವಾಗಿ ನಡೆಸಿದ್ದ ಪ್ರತಿಭಟನೆಯನ್ನು ಸೋಮವಾರ ಸೇವೆ ಬಹಿಷ್ಕರಿಸಿ ನಡೆಸಲು ನಿರ್ಧರಿಸಲಾಗಿದೆ. ಶುಕ್ರವಾರ ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದರು. ಕೆಲವು ವೈದ್ಯರು ಕಪ್ಪು ಪಟ್ಟಿಧರಿಸಿ ಸೇವೆ ಸಲ್ಲಿಸುವ ಮೂಲಕ ಪ್ರತಿಭಟಿಸಿದ್ದರು.

ಅಗತ್ಯ ಸಿದ್ಧತೆಗೆ ಸುತ್ತೋಲೆ:

ವೈದ್ಯರು ಹಮ್ಮಿಕೊಂಡಿರುವ ಮುಷ್ಕರದಿಂದಾಗಿ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆಸ್ಪತ್ರೆಗಳ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ರಜೆ ರದ್ದುಗೊಳಿಸಿ, ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವಂತೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

ವೈದ್ಯರ ರಕ್ಷಣೆ ಕಾಯ್ದೆ ಪಾಲನೆಯಾಗಿಲ್ಲ:

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಹೋರಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವೈದ್ಯರು ತೀವ್ರ ಹೋರಾಟ ನಡೆಸಿದ ಪರಿಣಾಮ ರಾಜ್ಯ ಸರ್ಕಾರ 2009ರಲ್ಲಿ ವೈದ್ಯಕೀಯ ಸೇವಾ ಸಿಬ್ಬಂದಿ ವಿರುದ್ಧ ಹಿಂಸಾಚಾರ ನಡೆಸಿದರೆ ಹಾಗೂ ವೈದ್ಯಕೀಯ ಸೇವಾ ಸಂಸ್ಥೆಗಳ ಆಸ್ತಿಗೆ ಹಾನಿ ಉಂಟುಮಾಡಿದರೆ ಕ್ರಮ ಕೈಗೊಳ್ಳುವ ಕುರಿತು ಕಾಯ್ದೆ ರೂಪಿಸಿತ್ತು.ಆದರೆ ಅದು ಕಾಗಕ್ಕೆ ಸೀಮಿತವಾಗಿದ್ದು, ಸೂಕ್ತ ರೀತಿಯಲ್ಲಿ ಜಾರಿಗೊಂಡಿಲ್ಲ. ಹೀಗಾಗಿ ವೈದ್ಯರ ಮೇಲಿನ ಹಲ್ಲೆ ಮುಂದುವರೆದಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವವರನ್ನು ಜಾಮೀನು ರಹಿತವಾಗಿ ಬಂ​ಧಿಸಿ, 3 ವರ್ಷ ಸಜೆಗೆ ಒಳಪಡಿಸಬೇಕು ಎಂದಿದೆ. ಆದರೆ 7 ವರ್ಷಕ್ಕಿಂತ ಕಡಿಮೆ ಸಜೆ ಇದ್ದರೆ ನ್ಯಾಯಾಲಯದಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ. ಹೀಗಾಗಿ ವೈದ್ಯರ ಮೇಲೆ ಹಲ್ಲೆ ನಡೆಸಿದವರಿಗೆ ಕನಿಷ್ಠ 7 ವರ್ಷ ಸಜೆ ನೀಡುವಂತಾಗಬೇಕು. ಬಂಧಿ​ಸಿದ ಬಳಿಕ ರೌಡಿ ಶೀಟರ್‌ ಪಟ್ಟಿಗೆ ಸೇರಿಸಬೇಕು ಎಂದು ವೈದ್ಯರು ಒತ್ತಾಯ ಮಾಡಿದ್ದಾರೆ.