ಇಂಗ್ಲೆಂಡ್(ಫೆ.13): ವೈದ್ಯ ವಿಜ್ಞಾನ ಅದೆಷ್ಟು ಮುಂದುವರೆದಿದೆ ಅಂತಾ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅದರಂತೆ ಸರ್ಜರಿ ಮಾಡಲು ತಾಯಿ ಹೊಟ್ಟೆಯೊಳಗಿದ್ದ ಮಗುವನ್ನು ಹೊರತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ತಾಯಿಯ ಹೊಟ್ಟಯೊಳಗಿಟ್ಟ ಅಚ್ಚರಿಯ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

ಇಲ್ಲಿನ ಬೆತಾನ್ ಸಿಂಪ್ಸನ್ ಎಂಬ ಮಹಿಳೆ 4 ತಿಂಗಳ ಗರ್ಭಿಣಿ. ಆದರೆ ಮಗು ಸ್ಪಿನಾ ಬಿಫಿಡಾ ಸಮಸ್ಯೆಯಿಂದ ಬಳಲುತ್ತಿತ್ತು. ಸರ್ಜರಿ ಮಾಡದೇ ಬೇರೆ ದಾರಿಯೇ ಇರಲಿಲ್ಲ.

ಹಲವಾರು ಸ್ಕ್ಯಾನಿಂಗ್ ಬಳಿಕ ಮಗುವನ್ನು ತಾಯಿಯ ಹೊಟ್ಟಯಿಂದ ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಿ ನಂತರ ಮತ್ತೆ ಅದನ್ನು ತಾಯಿಯ ಗರ್ಭ ಏರಿಸುವ ನಿರ್ಧಾರಕ್ಕೆ ವೈದ್ಯರು ಬಂದಿದ್ದಾರೆ.

ಅದರಂತೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಫೇಸ್ ಬುಕ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಬೆತಾನ್ ಸಿಂಪ್ಸನ್, ಶಸ್ತ್ರಚಿಕಿತ್ಸೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಬೆತಾನ್ ಸಿಂಪ್ಸನ್ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಒಳಗಾದ ಇಂಗ್ಲೆಂಡ್ ನ ನಾಲ್ಕನೇ ಮಹಿಳೆ ಎಂಬುದು ವಿಶೇಷ.