ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ ಮತ್ತು ಹಿಂಸಾಚಾರಗಳಿಗೆ ಕಡಿವಾಣ ಹಾಕಬೇಕು; ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾರಕವಾಗಿರುವ ಸಿಇಎ ಕಾಯ್ದೆ ಕೈಬಿಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಐಎಂಎ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ರಾಜಶೇಖರ್ ಬಳ್ಳಾರಿ ತಿಳಿಸಿದ್ದಾರೆ.
ಬೆಂಗಳೂರು(ಅ. 01): ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಲಕ್ಷಾಂತರ ವೈದ್ಯರು ನಾಳೆ ಗಾಂಧಿ ಜಯಂತಿ ದಿನದಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್'ನ ಅಡಿಯಲ್ಲಿ 3 ಲಕ್ಷಕ್ಕೂ ಅಧಿಕ ಖಾಸಗಿ ವೈದ್ಯರು ಸೋಮವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಶಾಂತಿಯುತ ಪ್ರತಿಭಟನೆ ಕೈಗೊಳ್ಳಲಿದ್ದಾರೆ. ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ ಮತ್ತು ಹಿಂಸಾಚಾರಗಳಿಗೆ ಕಡಿವಾಣ ಹಾಕಬೇಕು; ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾರಕವಾಗಿರುವ ಸಿಇಎ ಕಾಯ್ದೆ ಕೈಬಿಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಗೆಂದು ಐಎಂಎ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ. ರಾಜಶೇಖರ್ ಬಳ್ಳಾರಿ ತಿಳಿಸಿದ್ದಾರೆಂದು ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿದೆ.
ವೈದ್ಯರ ಕೆಲ ಬೇಡಿಕೆಗಳು:
* ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲಿನ ಹಿಂಸಾಚಾರ ತಡೆಯಲು ಪ್ರಬಲ ಕೇಂದ್ರೀಯ ಶಾಸನ ರಚನೆಯಾಗಬೇಕು.
* ಸಿಇಎ(ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್) ಮತ್ತು ಪಿಸಿಪಿಎನ್'ಡಿಟಿ(ಗರ್ಭಪೂರ್ವ ತಪಾಸಣೆ ತಂತ್ರಜ್ಞಾನ) ಕಾಯ್ದೆಯಲ್ಲಿ ತಿದ್ದುಪಡಿಯಾಗಬೇಕು.
* ಎಂಬಿಬಿಎಸ್ ಅಥವಾ ಬಿಡಿಎಸ್ ಪದವಿ ಪಡೆಯದ ವೈದ್ಯರು ಔಷಧಗಳನ್ನು ಬರೆಯದಂತೆ ಕಾನೂನು ರಚಿಸಬೇಕು.
* ವೈಯಕ್ತಿಕ ವೈದ್ಯಕೀಯ ಕ್ಲಿನಿಕ್'ಗಳನ್ನು ಸಿಇಎ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕು.
* ಪ್ರಕೃತಿ ವಿಕೋಪ, ಲೈಂಗಿಕ ದೌರ್ಜನ್ಯ, ಕಳ್ಳಬಟ್ಟಿ ದುರಂತ ಮೊದಲಾದ ಪ್ರಕರಣಗಳಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಉಚಿತ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಬಾರದು.
* ವೈದ್ಯಕೀಯ ನಿರ್ಲಕ್ಷ್ಯತೆ ಮತ್ತು ದೋಷಗಳ ಪ್ರಕರಣಗಳನ್ನು ಕ್ರಿಮಿನಲ್ ಪ್ರಕರಣಗಳೆಂದು ಪರಿಗಣಿಸಬಾರದು.
* ಕೇಂದ್ರ ಸರಕಾರದ ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ಥಾಪನೆಯನ್ನು ಕೈಬಿಡಬೇಕು
