ಡಾಕ್ಟ್ರೇ ಚೆನ್ನಾಗಿದ್ದೀರಾ?

Doctor's Day Special
Highlights

ಪ್ರತಿಯೊಬ್ಬನೂ ತನ್ನೊಳಗೆ ಒಬ್ಬ ವೈದ್ಯನನ್ನು ಸದಾ ಹೊತ್ತುಕೊಂಡೇ ತಿರುಗಾಡುತ್ತಿರುತ್ತಾನೆ ಅನ್ನುವ ಮಾತೊಂದಿದೆ. ನಮಗಿಂತ ಚೆನ್ನಾಗಿ ನಮ್ಮ ದೇಹವನ್ನು ಬಲ್ಲವರು ಯಾರು? ನಮಗೆ ಏನೋ ಆಗಿದೆ ಅನ್ನುವುದಂತೂ ನಮಗೆ ಗೊತ್ತಾಗುತ್ತದೆ. ಅದೇನು ಅನ್ನುವುದನ್ನು ಹೇಳುವುದಕ್ಕೆ ನಮಗೆ ವೈದ್ಯರ ಸಹಾಯ ಬೇಕು. 

ಇತ್ತೀಚೆಗೆ ನನ್ನ ಗೆಳೆಯ ನಮ್ಮೂರಿನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತಮ್ಮ ಕ್ಲಿನಿಕ್ಕಿನ ಮೊದಲನೆಯ ಮಹಡಿಯಲ್ಲಿ ನಿಂತಿದ್ದ ಡಾಕ್ಟರು ಅವನನ್ನು ಅಲ್ಲಿಂದಲೇ ಕಂಡರಂತೆ. ಒಂದು ಕ್ಷಣ ಅವನನ್ನು ಗಮನಿಸಿದ ಅವರು ಅಲ್ಲಿಂದಲೇ ಅವನನ್ನು ಕೂಗಿ ಕರೆದರು. ಒಂದಷ್ಟು ಲೋಕಾಭಿರಾಮ ಮಾತಾಡಿದ ನಂತರ, ಒಂದು ಚೀಟಿಯಲ್ಲಿ ಅದೇನನ್ನೋ ಬರೆದುಕೊಟ್ಟು, ಮಂಗಳೂರಿಗೆ ಹೋದಾಗ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಬಾ ಅಂದರು.

ಅವನು ಅದಾಗಿ ಎರಡು ವಾರದ ನಂತರ ಮಂಗಳೂರಿಗೆ ಹೋಗಿದ್ದಾಗ, ಆ ಟೆಸ್ಟ್ಗಳನ್ನು ಮಾಡಿಸಿಕೊಂಡು ಬಂದ. ನೋಡಿದರೆ ಅವನಿಗೊಂದು ಸಣ್ಣ ಸಮಸ್ಯೆಯಿರುವುದು ಗೊತ್ತಾಯಿತು. ತಾನು ಬಾಲ್ಯದಿಂದಲೂ ನೋಡುತ್ತಿದ್ದವನಿಗೆ ಉದ್ಭವಿಸಿರಬಹುದಾದ ಸಮಸ್ಯೆಯೊಂದನ್ನು ಅವರು ದೂರದಿಂದಲೇ ಗ್ರಹಿಸಿದ್ದರು. ಅಲ್ಲದೇ, ಅದು ಇಂಥದ್ದೇ ತೊಂದರೆ ಇರಬಹುದು ಎಂದು ಕರಾರುವಾಕ್ಕಾಗಿ ಲೆಕ್ಕಹಾಕಿದ್ದರು. ಅದೇ ಟೆಸ್ಟ್ ಮಾಡಿಸುವಂತೆ ಹೇಳಿದ್ದರು.

ಅವರೇನೂ ವಿದೇಶದಲ್ಲಿ ಓದಿದವರಲ್ಲ. ಎಂಬಿಬಿಎಸ್ ಮಾಡಿಕೊಂಡು ಜನರಲ್ ಮೆಡಿಕಲ್ ಪ್ರಾಕ್ಟೀಶನರ್ ಆಗಿದ್ದವರು. ಅವರ ಕ್ಲಿನಿಕ್ಕಿನಲ್ಲಿ ಒಂದು ಹಳೆಯ ಸ್ಟೆಥಾಸ್ಕೋಪು ಮತ್ತು ಒಂದು ಬೀಪಿ ನೋಡುವ ಸ್ಪೈಗ್ಮೋಮಾನೋಮೀಟರ್ ಬಿಟ್ಟರೆ ಬೇರೆ ಯಾವ ಪರಿಕರಗಳನ್ನೂ ನಾವ್ಯಾರೂ ನೋಡಿಲ್ಲ. ಅವುಗಳನ್ನು ಕೂಡ ಅವರು ಯಾವಾಗೆಂದರೆ ಆವಾಗ ಬಳಸುವುದೂ ಇಲ್ಲ. ಎದುರಿಗೆ ಕೂತು ಹತ್ತು ಹದಿನೈದು ನಿಮಿಷ ಮಾತಾಡುತ್ತಲೇ ಅವರು ಕಾಯಿಲೆ ಏನೆಂಬುದನ್ನು ಪತ್ತೆ ಹಚ್ಚಿಬಿಡುತ್ತಿದ್ದರು.

ಮೂವತ್ತು ವರುಷಗಳ ಹಿಂದೆ ನಮ್ಮೂರಲ್ಲಿ ಒಬ್ಬರಿಗೆ ಹರ್ಪಿಸ್ ಆಗಿತ್ತು. ಅದನ್ನು ಹಳ್ಳಿಗಳಲ್ಲಿ ಸರ್ಪಸುತ್ತು ಎಂದು ಕರೆಯುತ್ತಾರೆ. ಅದಕ್ಕೆ ಔಷಧಿಯಿಲ್ಲ ಅಂತಲೂ  ಗಿಡಮೂಲಿಕೆಗಳೇ ಗತಿ ಎಂದೂ ಪ್ರತೀತಿ ಇದ್ದ ಕಾಲ ಅದು. ಆಗಲೇ ಅವರು ಹರ್ಪಿಸ್ ಬರುವುದು ವೈರಸ್ಸಿನಿಂದ ಕಣ್ರೀ, ಅದಕ್ಕೆ ನಾನು ಔಷಧಿ ಕೊಡುತ್ತೇನೆ ಎಂದು ಹೇಳಿ ಒಂದು ಇಂಜೆಕ್ಷನ್ ಕೊಟ್ಟು ರೋಗಿಗಳನ್ನು ಸರ್ಪಸುತ್ತುವಿನ ಯಾತನೆ ಮತ್ತು ಹುಣ್ಣುಗಳಿಂದ ಮುಕ್ತಗೊಳಿಸುತ್ತಿದ್ದರು. ಅದಕ್ಕೆ ತಗಲುತ್ತಿದ್ದ ಖರ್ಚು ಏಳೋ ಎಂಟೋ ರುಪಾಯಿ.

ಇತ್ತೀಚೆಗೆ ಗೆಳೆಯರೊಬ್ಬರ ಮಗಳಿಗೆ ಹರ್ಪಿಸ್ ಆದಾಗ ಅವರು ನಲವತ್ತೆಂಟು ಸಾವಿರ ಖರ್ಚು ಮಾಡಿದರಂತೆ. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದರಂತೆ. ಇದೇಕೆ ಹೀಗೆ ಅಂತ ಕೇಳಿದಾಗ ಒಬ್ಬರು ವೈದ್ಯರೇ ತಮಾಷೆಯಾಗಿ ಹೇಳಿದರು: ಈಗ ಫ್ಯಾಮಿಲಿ ಡಾಕ್ಟರ್ ಎಂಬ ಪರಿಕಲ್ಪನೆಯೇ ಇಲ್ಲ. ನೀವೆಲ್ಲ ರೋಗ ಬಂದ ತಕ್ಷಣ ಅತಿ ದೊಡ್ಡ ಆಸ್ಪತ್ರೆಗೆ ಹೋಗುತ್ತೀರಿ. ಅಲ್ಲಿ ಅವರು ಕೇಳಿದಷ್ಟು ಫೀಸು ಕೊಡುತ್ತೀರಿ. ಆಸ್ಪತ್ರೆ ದೊಡ್ಡದಾದಷ್ಟು ರೋಗವೂ ದೊಡ್ಡದಾಗುತ್ತದೆ ಅನ್ನುವುದು ನಿಮಗೆ ಗೊತ್ತಾಗುವುದೇ ಇಲ್ಲ.

ನಿಮ್ಮ ಮನೆಯ ಪಕ್ಕದಲ್ಲಿರುವ ಜನರಲ್ ಮೆಡಿಕಲ್ ಪ್ರಾಕ್ಟೀಷನರ್ ಬಳಿಗೆ ಹೋಗುವುದಕ್ಕೆ ನಿಮಗೆ ಭಯ. ದೊಡ್ಡ ಆಸ್ಪತ್ರೆಗಳಲ್ಲಿರುವ ವೈದ್ಯರು ಮಾತ್ರ ಜೀವ ಉಳಿಸಬಲ್ಲರು ಎಂಬ ನಿಮ್ಮ ನಂಬಿಕೆಯೇ ಈ ದುಂದುವೆಚ್ಚಕ್ಕೆ ಕಾರಣ. ನಾವೂ ದುಡ್ಡು ಮಾಡುವ ಆತುರಕ್ಕೆ ಬಿದ್ದಿದ್ದೇವೆ. ಹೀಗಾಗಿ ಡಾಕ್ಟರಿಗೆ ಫ್ಯಾಮಿಲಿ ಇಲ್ಲ, ಫ್ಯಾಮಿಲಿಗೆ ಡಾಕ್ಟರು ಇಲ್ಲ! ಇಂಥ ಕತೆಗಳನ್ನೆಲ್ಲ ಹೇಳಿದಾಗ, ಬೆಂಗಳೂರಿನಲ್ಲಿ ಅಂಥ ಒಳ್ಳೇ ಡಾಕ್ಟರು ಎಲ್ಲಿ ಸಿಗ್ತಾರ‌್ರೀ ಅಂತ ಅನೇಕರು ಹುಬ್ಬುಗಂಟಿಕ್ಕುತ್ತಾರೆ.

ತಮಾಷೆಯೆಂದರೆ ಇವತ್ತು ಏಕರೂಪದ ಕಾಫಿಗೆ ಕಾಫಿಡೇ, ಏಕರೂಪದ ಕೋಳಿಗೆ ಕೆ ಎಫ್ ಸಿ, ಏಕರೂಪದ ಬರ್ಗರ್‌ಗೆ ಮ್ಯಾಕ್‌ಡಿ ಇದ್ದಂತೆ  ಆಸ್ಪತ್ರೆಗಳಲ್ಲೂ ಏಕರೂಪ ಬಂದಿದೆ. ಬ್ರಾಂಡೆಡ್ ಆಸ್ಪತ್ರೆಗಳು ದೇಶದ ಪ್ರಮುಖ ರಾಜ್ಯಗಳ ರಾಜಧಾನಿಯಲ್ಲಿ ತಲೆಯೆತ್ತಿವೆ. ಅವುಗಳ ಜಾಹೀರಾತುಗಳು ಮನೆಗೆ ಬಂದು ಬೀಳುತ್ತಿರುತ್ತವೆ. ತಮಾಷೆಯೆಂದರೆ ಆಸ್ಪತ್ರೆಗಳೂ ಇತ್ತಿತ್ತಲಾಗಿ ಪ್ರವಾಸೀತಾಣಗಳಂತೆ ಆಗಿಹೋಗಿವೆ. ಇತ್ತೀಚೆಗೆ ಗೆಳೆಯರೊಬ್ಬರ ಮಗುವಿಗೆ ಜ್ವರ ಬಂದಿತ್ತು ಎಂದು ಅಂಥ ಐಷಾರಾಮಿ ಆಸ್ಪತ್ರೆಗೆ ಸೇರಿಸಿದ್ದರು. ಆ ಹುಡುಗ ಹುಷಾರಾಗಿ ಬಂದ ನಂತರ ತನ್ನ ಗೆಳೆಯರಿಗೆ ತಾನು ಹೋದ ಆಸ್ಪತ್ರೆ ಎಷ್ಟು ಚೆನ್ನಾಗಿತ್ತು. ಏರ್ ಕಂಡೀಷನ್ ರೂಮು, ರೆಫ್ರಿಜರೇಟರ್, ಟೆಲಿವಿಷನ್, ಮ್ಯೂಸಿಕ್, ಆಟ ಆಡೋದಕ್ಕೆ ಟ್ಯಾಬ್- ಹೀಗೆ ಏನೇನೆಲ್ಲ ಇದೆ ಎಂದು ಹೇಳುತ್ತಿದ್ದ. ಅವನು ಯಾವುದೋ ವಿದೇಶೀ ಪ್ರವಾಸ ಹೋಗಿ ಬಂದಿದ್ದಾನೆ ಅನ್ನಿಸುವಂತಿತ್ತು ಅವನ ಮಾತು.

ವರ್ಷ ವರ್ಷವೂ ಹೋಗಿ ಹೆಲ್ತ್ ಚೆಕಪ್ ಮಾಡಿಸಿಕೊಂಡು ಬರುವುದು ಕೂಡ ಒಂದು ಜೀವನಶೈಲಿಯೇ ಆಗಿರುವ ದಿನಗಳಿವು. ಇಲ್ಲಿ ನಿಮ್ಮ ಆರೋಗ್ಯವನ್ನು ವೈದ್ಯರು ಪತ್ತೆ ಹಚ್ಚುವುದು ಯಂತ್ರಗಳ ಮೂಲಕವೇ ಹೊರತು, ಅಲ್ಲಿ ವೈಯಕ್ತಿಕವಾದದ್ದು ಏನೂ ಇಲ್ಲ. ಹಲವು ವರ್ಷಗಳಿಂದ ಬಲ್ಲ ವೈದ್ಯರೊಬ್ಬರು ನಿಮ್ಮನ್ನು ಮನೆಯ ಸದಸ್ಯನಂತೆ ನೋಡುತ್ತಾರೆಂದು ಭಾವಿಸುವುದಕ್ಕಂತೂ ಸಾಧ್ಯವೇ ಇಲ್ಲ. ನಮ್ಮ ಭಾಷೆ, ಜೀವನಕ್ರಮ, ಅಹಾರ ಪದ್ಧತಿ, ಪರಿಸರ, ಉದ್ಯೋಗ, ಪಿತ್ರಾರ್ಜಿತ ಕಾಯಿಲೆಗಳು- ಇವ್ಯಾವುವೂ ಗೊತ್ತಿಲ್ಲದ ಒಬ್ಬರು ನಮ್ಮನ್ನು ಒಬ್ಬ ರೋಗಗ್ರಸ್ತ ಮನುಷ್ಯನ ಹಾಗೆ ನೋಡುತ್ತಾರೆ. ಯಂತ್ರಗಳು ಹೊರಡಿಸುವ ಚೀಟಿಯ ಮೂಲಕ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ರಕ್ತದ ಒತ್ತಡ ಇಷ್ಟಿರಬೇಕು, ರಕ್ತದಲ್ಲಿ  ಇಷ್ಟು ಗ್ಲುಕೋಸ್ ಇರಬೇಕು,

ಟ್ರೈಗ್ಲಿಸರಾಯಿಡ್ಸ್ ಇಂತಿಷ್ಟೇ ಇರಬೇಕು- ಎಂಬ ಅಪ್ಪಟ ಲೆಕ್ಕಾಚಾರವೇ ನಿಮ್ಮ ಆರೋಗ್ಯದ ಗುಟ್ಟು. ಲೆಕ್ಕ ಸರಿಯಿದ್ದರೆ ದುಃಖವಿಲ್ಲ! ಇಂತಿಪ್ಪ ಪರಿಸ್ಥಿತಿಯಲ್ಲಿ ವಯಸ್ಸಿನ ಪರಿವೆಯನ್ನೂ ಈ ಯಂತ್ರಗಳು ಗಮನಿಸುವುದಿಲ್ಲ ಅನ್ನುವುದೂ ನಿಜವೇ? ಸರಾಸರಿಯಲ್ಲಿ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಅದಕ್ಕೆ ಪರಿಹಾರ ಕೂಡ ಏಕರೂಪದ್ದೇ. ಬೆಳಗ್ಗೆ ಪಾರ್ಕುಗಳಲ್ಲಿ ಓಡಾಡುವವರು, ಶುಗರ್‌ಲೆಸ್ ಕಾಫಿಟೀ ಕುಡಿಯುವವರು, ವಾರಕ್ಕೊಂದು ದಿನ ಒಂಚೂರು ‘ತಗೋ’ಬಹುದಾ ಅಂತ ಆರ್ತರಾಗಿ ಕೇಳುವವರು, ದಿನಕ್ಕೆ ಆರೂಟ ಮಾಡುವವರು. 

ಬೆಳಗಾಗೆದ್ದು ಲೀಟರ್‌ಗಟ್ಟಲೆ ನೀರು ಕುಡಿಯುವವರು, ದಿನಕ್ಕೆ ಮೂರು ಸಲ ರಕ್ತಪರೀಕ್ಷೆ ಮಾಡಿಕೊಳ್ಳುವವರು, ಕ್ಯಾಲರಿ ಲೆಕ್ಕ ಹಾಕಿ ಊಟ ಮಾಡುವವರು- ಹೀಗೆ ಮಹಾನಗರಗಳಲ್ಲಿ ವಿಚಿತ್ರವಾದ ಜೀವನಶೈಲಿ ಇದೆ ಅಂತ ಕೆಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಮಾತಾಡಿಕೊಳ್ಳುತ್ತಿದ್ದರು. ಈಗ ಹಳ್ಳಿಗಳ ಸ್ಥಿತಿಯೂ ಹಾಗೆಯೇ ಆಗಿದೆ. ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಬೆಳಗಿನ ಜಾವ ಬುಸುಬುಸು ಅಂತ ಏದುಸಿರು ಬಿಡುತ್ತಾ ಓಡುವವರು ಒಂದಿಬ್ಬರಾದರೂ
ಸಿಗುತ್ತಾರೆ.

ಆರೋಗ್ಯ ಯಾವುದರಲ್ಲಿದೆ ಅನ್ನುವುದನ್ನು ನಮಗೆ ಹೇಳುವುದಕ್ಕೆ ಇವತ್ತು ವೈದ್ಯರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಮನೆ ಮನೆಯಲ್ಲಿ ಮನೆ ಮದ್ದು ಕೊಡುತ್ತಿದ್ದ ಅಜ್ಜಿ, ತರಚಿದ ಗಾಯವಾದರೆ ಕೊಬ್ಬರಿ ಎಣ್ಣೆ, ರಕ್ತ ಚಿಮ್ಮಿದರೆ ಕಾಫಿಪುಡಿ, ಕಜ್ಜಿಯಾದರೆ ಅದ್ಯಾವುದೋ ಗಿಡದ ಹಾಲು, ಕಣ್ಣು ಕೆರೆದರೆ ಕೊತ್ತಂಬರಿ ನೀರು, ಕಿವಿ ಸೋರುತ್ತಿದ್ದಂತೆ ಮೆಣಸಿನ ಎಣ್ಣೆ, ಮೊಡವೆಗೆ ರಕ್ತಚಂದನ, ಚರ್ಮರೋಗಕ್ಕೆ ಅರಿಶಿನ- ಹೀಗೆ ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯಲ್ಲೇ ಔಷಧಿ ಸಿಗುತ್ತಿತ್ತು. ದೊಡ್ಡ ಕಾಯಿಲೆಗಳು ಒಂಚೂರು ಶುಚಿತ್ವ

ಕಾಪಾಡಿಕೊಂಡರೆ ಬರುತ್ತಲೂ ಇರಲಿಲ್ಲ. ಈಗ ಇವೆಲ್ಲಕ್ಕೂ ವೈದ್ಯರೇ ಗತಿ. ಡೆಂಗ್ಯು ಬಂದಾಗ ವೈದ್ಯರೊಬ್ಬರು ಹೇಳುತ್ತಿದ್ದರು. ಮನೆಯಲ್ಲೇ ಕೂತು ರೆಸ್ಟ್ ತೆಗೆದುಕೊಂಡು ಚೆನ್ನಾಗಿ ನೀರು ಕುಡಿಯುತ್ತಿದ್ದರು ಅದು ಏಳು ದಿನಕ್ಕೆ ವಾಸಿಯಾಗುತ್ತದೆ. ದೊಡ್ಡ ಆಸ್ಪತ್ರೆಗೆ ಹೋದರೆ ಐವತ್ತು ಸಾವಿರ ಕೈಬಿಡುತ್ತದೆ, ಒಂದೇ ವಾರದಲ್ಲಿ ಗುಣವಾಗುತ್ತದೆ. ಆರೋಗ್ಯವೆಂಬುದು ವ್ಯಾಪಾರ ಅನ್ನುವುದು ರೋಗಿಗೂ ಗೊತ್ತಿರಲಿಲ್ಲ. ವೈದ್ಯರಿಗೂ ಗೊತ್ತಿರಲಿಲ್ಲ. ಅದೊಂದು ಸೇವೆ ಅಂತ ಅಂದುಕೊಂಡ ಕಾರಣಕ್ಕೆ ಅದಕ್ಕೊಬ್ಬ ಧನ್ವಂತರಿ ಎಂಬ ದೇವತೆ. ವೈದ್ಯೋ ನಾರಾಯಣೋ ಹರಿಃ ಎಂಬ ಮಾತು. ಈಗ ಕ್ಲಿನಿಕ್ಕಿನ ಹೆಸರೇ ಧನ್ವಂತರಿ.

ಇತ್ತೀಚೆಗೆ ನನ್ನ ಗೆಳೆಯರ ಮಗನಿಗೆ ಕಿಡ್ನಿ ಸ್ಟೋನ್ ಆಗಿತ್ತು. ಅವರು ಗೊತ್ತಿರುವ ವೈದ್ಯರಿಗೆ ಫೋನ್ ಮಾಡಿದರು. ಅವರು ಗಾಬರಿ ವ್ಯಕ್ತಪಡಿಸಿ ತಕ್ಷಣವೇ ಆತನನ್ನು ತಮಗೆ ಗೊತ್ತಿರುವ ಆಸ್ಪತ್ರೆಗೆ ಸೇರಿಸಲು ಹೇಳಿದರು. ಮಾರನೇ ದಿನವೇ ಆಪರೇಷನ್ ಮಾಡುವುದೆಂದು ನಿಗದಿಯಾಯಿತು. ಆ ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವುದಕ್ಕೆ ಬೇಕಾದ ವ್ಯವಸ್ಥೆ ಇರಲಿಲ್ಲ. ಅವರು ಹೊರಗಿನಿಂದ ಮೊಬೈಲ್ ಆಪರೇಷನ್ ವ್ಯಾನ್ ತರಿಸಿ, ಅದರಲ್ಲಿ ಆ ಹುಡುಗನನ್ನು ಮಲಗಿಸಿ ಸರ್ಜರಿ ಮಾಡಿದರು. ಹಾಗಂತ ಬಿಲ್ಲಿನಲ್ಲೇನೂ ರಿಯಾಯಿತಿ ಕೊಡಲಿಲ್ಲ. ಸುಸಜ್ಜಿತ ಆಪರೇಷನ್ ಥೇಟರಿನಲ್ಲಿ ಸರ್ಜರಿ ಮಾಡುವಷ್ಟೇ ಮೊತ್ತ ವಸೂಲಿ ಮಾಡಿದ್ದರು.

ವೈದ್ಯ ನೆಂಟನಲ್ಲ, ಸಹಾಯಕ  ಭಂಟನಲ್ಲ ಅನ್ನುವ ಮಾತು ಮತ್ತೆ ನಿಜವಾಯಿತು. ಇದೇ ಕಿಡ್ನಿಸ್ಟೋನ್ ಕಾಯಿಲೆ ಒಂದು ಕಾಲದಲ್ಲಿ ಎಷ್ಟು ಸದ್ಬುದ್ಧಿ ಹೊಂದಿತ್ತು ಅನ್ನುವುದನ್ನು ಕೇಳಿ. ನಾವು ಊರಲ್ಲಿದ್ದಾಗ ನಮ್ಮೂರಲ್ಲೊಬ್ಬನಿಗೆ ಹೊಟ್ಟೆ ನೋವು ಶುರುವಾಯಿತು. ಸತ್ತೇಹೋಗುತ್ತೇನೆ ಎನ್ನುವ ಹಾಗೆ ಚೀರತೊಡಗಿದ. ಮೊದಲ ದಿನ ಮನೆಯಲ್ಲಿ ಇಂಗು ಮಜ್ಜಿಗೆ ಕುಡಿಸಿದ್ದಾಯಿತು. ಹೊಟ್ಟೆ ನೋವಿನ ಮದ್ದು ಕುಡಿಸಿದ್ದಾಯಿತು. ಎರಡನೆಯ ದಿನ ಕ್ಲಿನಿಕ್ಕಿಗೆ ಹೋದಾಗ ಅಲ್ಲಿಯ ಡಾಕ್ಟರು ಅವನಿಗೆ ಒಂದು ನಿದ್ದೆ ಇಂಜೆಕ್ಷನ್ ಕೊಟ್ಟರು. ಚೆನ್ನಾಗಿ ನೀರು ಕುಡಿಸಲು ಹೇಳಿದರು. ಜೊತೆಗೆ ಲಿಂಬೆಹಣ್ಣಿನ ಶರಬತ್ತು ಕೊಡಿ ಅಂದರು. ಮೂರನೇ ದಿನಕ್ಕೆ ಕಲ್ಲು ಹೊರಗೆ ಹೋಯಿತು. ಈಗಿನ ಕಲ್ಲುಗಳಿಗೆ ಅಂಥ ಕರುಣೆ ಇಲ್ಲ. ಅವು ಕರಗಬೇಕಿದ್ದರೆ ಒಂದು ಲಕ್ಷ ರುಪಾಯಿಯಾದರೂ ಕರಗಬೇಕು.

ನಮಗೆ ನಮ್ಮ ದೇಹಕ್ಕಿಂತ ಡಾಕ್ಟರ ಮೇಲೆ ಹೆಚ್ಚು ಪ್ರೀತಿ ಹುಟ್ಟಿಬಿಟ್ಟಿದೆ. ನಮ್ಮ ನಮ್ಮ ತನುವ ನಾವು ಸಂತೈಸಿಕೊಳ್ಳಬೇಕು ಅನ್ನುವುದು ಮರೆತೇಹೋಗಿದೆ. ನಮಗೆ ಸಾಂತ್ವನ ಹೇಳುವುದಕ್ಕೆ ಆಪ್ತಸಮಾಲೋಚನೆ, ಸಂತೈಸುವುದಕ್ಕೆ ವೈದ್ಯರು ಬೇಕೆಬೇಕು. ಆತ್ಮವಿಶ್ವಾಸ ಮತ್ತು ತಾಳ್ಮೆಯೂ ಔಷಧ ಅನ್ನುವುದು ನಮಗೆ ಮರೆತೇಹೋಗಿದೆ. ದೈಹಿಕ ಶ್ರಮಕ್ಕಿಂತ ಒಳ್ಳೆಯ ಧನ್ವಂತರಿ ಇಲ್ಲ ಅಂದರೆ ಯಾರೂ ನಂಬುತ್ತಲೇ ಇಲ್ಲ. ಇದೆಲ್ಲ ಹಾಗಿರಲಿ, ಡಾಕ್ಟರೇ ನೀವು ಹೇಗಿದ್ದೀರಿ? ಚೆನ್ನಾಗಿದ್ದೀರಾ? 

-ಜೋಗಿ 

loader