ಇಶಾ ಪಂತ್ ತುಮಕೂರಿನ ಎಸ್’ಪಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಮೇಲೆ ತುಮಕೂರಿನ ಹೆಣ್ಮಕ್ಕಳೆಲ್ಲಾ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಾರೆ. ತಮ್ಮ ನೋವನ್ನು ಕೇಳುವ ಮತ್ತು ಆ ನೋವನ್ನು ದೂರ ಮಾಡುವ ಜೀವವೊಂದಿದೆ ಅನ್ನುವ ನಂಬಿಕೆಯೇ ಅದೆಷ್ಟೋ ಹೆಣ್ಣು ಮಕ್ಕಳ ಜೀವನವನ್ನು ಸಹ್ಯವಾಗಿಸಿದೆ. ಅಂಥಾ ಇಶಾ ಪಂತ್ ಎಂಬ ಹೆಣ್ಣು ಮಗಳ ಬಗೆಗಿನ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ

ಕೇವಲ ಐದು ವರ್ಷದ ಹಿಂದಿನ ಮಾತು. 2011ರ ಐಪಿಎಸ್‌ ಬ್ಯಾಚ್‌ನಲ್ಲಿ ಪಾಸ್‌ ಆಗಿ ಹೈದರಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಪೊಲೀಸ್‌ ತರಬೇತಿ ಮುಗಿಸಿ ಮಧ್ಯಪ್ರದೇಶದ ಜಬಲ್ಬುರಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಾಗ ಮುಂದೊಂದು ದಿನ ಇಡೀ ದೇಶವೇ ತನ್ನ ಬಗ್ಗೆ ಮಾತನಾಡುತ್ತದೆ ಎಂಬ ಅರಿವು ಅವರಿಗಿರಲಿಲ್ಲ.

ಆಗಷ್ಟೇ ಮಧ್ಯಪ್ರದೇಶಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆಲಸಕ್ಕೆ ಸೇರಿದಾಗ ಆ ರಾಜ್ಯದಲ್ಲಿ ಸಾರಾಯಿ ಮಾಫಿಯಾ ಹಾಗೂ ಡ್ರಗ್‌ ಮಾರಾಟ ದೊಡ್ಡ ಮಟ್ಟದಲ್ಲಿತ್ತು. ನೋಡ ನೋಡುತ್ತಲೇ ಇಡೀ ರಾಜ್ಯದಲ್ಲಿ ಸಾರಾಯಿ ಮಾಫಿಯಾ ಹಾಗೂ ಡ್ರಗ್ಸ್‌ ಮಾರಾಟವನ್ನು ಬುಡಸಮೇತ ಕಿತ್ತು ಹಾಕಿದ್ದ ವ್ಯಕ್ತಿ ಒಬ್ಬ ಮಹಿಳೆ ಅಂದರೆ ನೀವು ಆಶ್ಚರ್ಯಪಡಬಹುದು.

ಅಂದ ಹಾಗೆ ಆಕೆ ಹೆಸರು ಇಶಾ ಪಂತ್‌. ಈಕೆ ಜಬಲ್ಬುರ ದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು ಸಾಮಾನ್ಯ ಜನರು ಗೌರವ ಭಾವನೆಯಿಂದ ಕಾಣುತ್ತಿದ್ದರೆ, ಮಾಫಿಯಾದವರು ಪೇರಿ ಕೀಳುತ್ತಿದ್ದರು. ಇಂತಹ ಖಡಕ್‌ ಆಫೀಸರ್‌ ಸಾÜರಾಯಿ ಮಾಫಿಯಾ ಹಾಗೂ ಡ್ರಗ್ಸ್‌ ಅನ್ನು ನಿಯಂತ್ರಣಕ್ಕೆ ತಂದದ್ದು ಇಡೀ ದೇಶವೇ ಮಾತನಾಡಿತು. ಡ್ರಗ್‌ ಮಾಫಿಯಾದವರನ್ನು ಇಶಾ ಪಂತ್‌ ತಂಡ ಚೇಸ್‌ ಮಾಡಿ ಜೈಲಿಗೆ ಅಟ್ಟುತ್ತಿದ್ದ ವಿಷಯ ತಿಳಿದ ಸಿನಿಮಾ ನಿರ್ದೇಶಕ ಪ್ರಕಾಶ್‌ ಝಾ ಅವರು ಇಶಾ ಪಂತ್‌ ಅವರ ಸಾಹಸದಿಂದ ಸ್ಫೂರ್ತಿ ಪಡೆದು ‘ಗಂಗಾಜಲ್‌' ಎಂಬ ಸಿನಿಮಾ ನಿರ್ದೇಶಿಸಿದರು. ಅದರಲ್ಲಿ ಇಶಾ ಪಂತ್‌ ಪಾತ್ರವನ್ನು ಪ್ರಿಯಾಂಕಾ ಚೋಪ್ರಾ ಮಾಡಿದರು. ಆ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ದಿನ ಬೆಳಗಾಗುವುದರಲ್ಲಿ ಇಶಾ ಪಂತ್‌ ಎಲ್ಲರಿಗೂ ಚಿರಪರಿಚಿತ ಹೆಸರಾದರು.

ಹೆಲ್ಮೆಟ್‌ ಹಾಕಿದವರಿಗೆ ಗುಲಾಬಿ ಹೂವು
ಲೇಡಿ ಟೈಗರ್‌ ಎಂದೇ ಕರೆಸಿಕೊಂಡಿದ್ದ ಇಶಾ ಪಂತ್‌ ಎಂಬ ದಕ್ಷ ಹಾಗೂ ಖಡಕ್‌ ಅಧಿಕಾರಿಯ ಅಂತರಂಗದಲ್ಲಿ ತಾಯ್ತನದ ಸೆಳೆತ ಇದೆ ಎಂಬುದು ಗೊತ್ತಾಗಿದ್ದು ತುಮಕೂರಿಗೆ ಬಂದ ಮೇಲೆ. ಹೌದು ತುಮಕೂರಿನ 36ನೇ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದ ಇಶಾ ಪಂತ್‌ ಮೊದಲ ಸಾರ್ವಜನಿಕರ ಗಮನ ಸೆಳೆದದ್ದು ತಮ್ಮ ಮುಗ್ಧ ನಗುವಿನಿಂದ. ಬಾಹ್ಯವಾಗಿ ಖಡಕ್‌ ಅಧಿಕಾರಿಯಾಗಿದ್ದರೂ ಅಂತರಂಗದಲ್ಲಿ ಮಾತೃ ಹೃದಯವುಳ್ಳ ವ್ಯಕ್ತಿಯಾಗಿರುವ ಕಾರಣ ಸಂತೈಸುವ ಗುಣವನ್ನು ಇಶಾ ಪಂತ್‌ ಹೊಂದಿದ್ದಾರೆ.

ತುಮಕೂರಿನಲ್ಲಿ ಹೆಲ್ಮೆಟ್‌ ಹಾಕುವುದನ್ನು ಕಡ್ಡಾಯಗೊಳಿಸಿದಾಗ ಬಹುತೇಕ ಮಂದಿ ಹೆಲ್ಮೆಟ್‌ ಧರಿಸದೇ ವಾಹನ ಚಲಾಯಿಸುತ್ತಿದ್ದರು. ಆಗೆಲ್ಲಾ ಪೊಲೀಸರು ದಂಡದ ರೂಪದಲ್ಲಿ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ ಇಶಾ ಪಂತ್‌ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದ ಮೇಲೆ ಖುದ್ದು ತಾವೇ ಕಾರ್ಯಾಚರಣೆಗೆ ಇಳಿದರು. ಆದರೆ ಅವರು ಹೆಲ್ಮೆಟ್‌ ಧರಿಸದವರಿಗೆ ದಂಡ ಹಾಕಲಿಲ್ಲ. ಬದಲಿಗೆ ಹೆಲ್ಮೆಟ್‌ ಹಾಕುವ ಮಹಿಳೆಯರಿಗೆ ಗುಲಾಬಿ ಹೂವು ಕೊಡುವ ಅಭಿಯಾನ ಆರಂಭಿಸಿದರು. ಇದರಿಂದ ಬೇರೆಯವರು ಸ್ಫೂರ್ತಿ ಪಡೆದು ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಲು ಶುರುಮಾಡಿದರು.

ಹಲವಾರು ಸಂಕಟದಿಂದ ಬಸವಳಿದು ಪೊಲೀಸ್‌ ಠಾಣೆ ಮೆಟ್ಟಲೇರಲು ಹೆದರಿ ಕಪ್ಪೆ ಚಿಪ್ಪಿನ ಹಾಗೆ ನೋವನ್ನು ನುಂಗುತ್ತಿದ್ದ ಮಹಿಳೆಯರ ಬಾಳಿಗೆ ಇಶಾ ಪಂತ್‌ ಆಶಾ ಕಿರಣರಾದರು. ಮಹಿಳೆಯರ ಪರ ನಿಲ್ಲುವ ಗಟ್ಟಿಧ್ವನಿಯನ್ನು ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದ ದಿನವೇ ಘೋಷಿಸಿದ್ದ ಕಾರಣ ತುಮಕೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಸಾಲು ಸಾಲು ಮಹಿಳೆಯರು ಬಂದು ತಮ್ಮ ದುಃಖ ದುಮ್ಮಾನ ತೋಡಿಕೊಂಡರು. ಹೆಣ್ಣು ಮಕ್ಕಳ ನೋವಿಗೆ ಅಕ್ಕನಂತೆ ಸ್ಪಂದಿಸಿದ ಇಶಾ ಬಹಳಷ್ಟುಮಹಿಳೆಯರ ಬದುಕಿನಲ್ಲಿ ಆಶಾ ಭಾವನೆ ಮೂಡಿಸಿದರು.

ಮಕ್ಕಳ ಕಣ್ಣೀರೊರೆಸಿದ ಮಮತಾಮಯಿ
ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ದಾರುಣವಾಗಿ ಸಾವನ್ನಪ್ಪಿದ ಮಕ್ಕಳ ಪೋಷಕರನ್ನು ಸಂತೈಸಿದ ರೀತಿ ಎಲ್ಲರ ಕಣ್ಣಲ್ಲೂ ನೀರಾಡುವಂತೆ ಮಾಡಿತು. ಅದರಲ್ಲೂ ಸೆಕ್ಯೂರಿಟಿ ಗಾರ್ಡ್‌ ಸತ್ತಾಗ ಆತನ ಮಕ್ಕಳು ಕಣ್ಣೀರಿಡುತ್ತಿದ್ದನ್ನು ಕಂಡ ಇಶಾ ಪಂತ್‌ ತಾವೊಬ್ಬ ದೊಡ್ಡ ಅಧಿಕಾರಿ ಎಂಬ ಯಾವ ಹಮ್ಮು ಬಿಮ್ಮು ಇಲ್ಲದೆ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಮಕ್ಕಳಿಗೆ ಬಿಸ್ಕತ್ತು, ಚಾಕಲೇಟು ತಿನ್ನಿಸುತ್ತಿದ್ದುದು ಎಲ್ಲರ ಕಣ್ಣಲ್ಲೂ ನೀರಾಡುವಂತೆ ಮಾಡಿತು.

ಮೊನ್ನೆ ಮೊನ್ನೆ ಪೊಲೀಸ್‌ ಅಧಿಕಾರಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಗ ಅವರ ಮನೆಗೆ ಹೋದ ಇಶಾ ಪಂತ್‌ ಪೊಲೀಸ್‌ ಅಧಿಕಾರಿಯ ಪತ್ನಿ ಮತ್ತು ಮಕ್ಕಳನ್ನು ಸಂತೈಸಿದ ರೀತಿಯನ್ನು ಗಮನಿಸಿದಾಗ ಅವರಲ್ಲಿರುವ ತಾಯ್ತನ ಪೊರೆವ ಗುಣ ಎಂಥವರಿಗೂ ಕಾಣಿಸುತ್ತದೆ. ಬಾಹ್ಯವಾಗಿ ಖಡಕ್‌ ಅಧಿಕಾರಿಯಾಗಿದ್ದರೂ ಅಂತರಂಗದಲ್ಲಿ ತಾಯ್ತನದ ಗುಣ ಹೊಂದಿರುವ ಇಶಾ ಪಂತ್‌ ಅಕ್ಷರಶಃ ತುಮಕೂರಿನ ಜನರ ಪಾಲಿಗೆ ಮಾತೆಯಾಗಿದ್ದಾರೆ.
ಐಎಎಸ್‌ ಅಧಿಕಾರಿಯಾಗಿರುವ ಅನಿರುದ್ಧ ಅವರನ್ನು ಮದುವೆಯಾದ ಬಳಿಕ ಕರ್ನಾಟಕಕ್ಕೆ ಬಂದ ಇಶಾ ಪಂತ್‌ ಕಲ್ಬುರ್ಗಿಯ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಕೆಲ ಕಾಲ ಕೆಲಸ ಮಾಡಿ ಈಗ ತುಮಕೂರಿನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.