ಹೊಸನಗರ(ಅ.31): ಮಾತೃಭಾಷೆ ಉರ್ದು ಕಡೆಗಣಿಸಿ ಆಂಗ್ಲ ಮಾಧ್ಯಮಕ್ಕೆ ಮೊರೆಹೋಗುವುದು ಸರಿ ಅಲ್ಲ ಎಂದು ಸಾಗರ ವಲಯ ಉರ್ದು ಶಿಕ್ಷಣ ಸಂಯೋಜಕ ಬಷೀರ್ ಅಹ್ಮದ್ ಅಭಿಪ್ರಾಯಟ್ಟರು.

ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉರ್ದು ಶಾಲೆ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಉರ್ದು ಜಾಗೃತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ಉರ್ದು ಭಾಷಾ ಮಾಧ್ಯಮ ಮಕ್ಕಳು ಹಾಗೂ ಪೋಷಕರಿಂದ ದೂರವಾಗುತ್ತಿದೆ. ಮತ್ತೆ ಅವರನ್ನು ಶಾಲೆ ಆವರಣದತ್ತ ಆಕರ್ಷಿಸಲು ಹಳೆ ವಿದ್ಯಾರ್ಥಿಗಳ ಸಲಹೆ, ಸಹಕಾರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ, ಅಖೀರ್ ಮದಾರ್ ಷಾ ಉರ್ದು ಭಾಷೆಯ ಸಮಗ್ರ ಪರಿಚಯ ಕುರಿತಂತೆ ಮಾಹಿತಿ ನೀಡಿ, ಸಾಹಿತ್ಯಕವಾಗಿ ಸಂಪದ್ಭರಿತ ಉರ್ದು ಭಾಷೆಯನ್ನು ಒಂದು ಸಮುದಾಯದಿಂದ ಗುರುತಿಸುತ್ತಿರುವುದು ವಿಷಾದ ಸಂಗತಿ ಎಂದು ಹೇಳಿದರು.

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಿ.ಕೆ. ಅನ್ವರ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉರ್ದು ಶಾಲೆಗಳ ಸಂಘದ ಅಧ್ಯಕ್ಷ ಶಂಷೀರ್ ಖಾನ್, ತಾಲೂಕು ಅಧ್ಯಕ್ಷ ಅಬ್ದುಲ್ ನಾಸಿರ್, ಪ್ರಮುಖರಾದ ಸಲೀಂ, ಶಾವಿಲ್ ಅಹ್ಮದ್, ಜಾಫರ್, ಅಬ್ದುಲ್ ರಷೀದ್, ತಾಹಿರ್ ಹಾಗೂ ಶಿಕ್ಷಕರು ಇದ್ದರು.