ಬೆಂಗಳೂರು (ಜೂ. 24): ನಗರದಲ್ಲಿ ಮಳೆ ಬಂದರೆ ವಿಜಿನಾಪುರ, ಕೆಂಪೇಗೌಡ ಹಾಗೂ ರಾಜಾಜಿನಗರ ಅಂಡರ್‌ ಪಾಸ್‌, ಹೆಬ್ಬಾಳ ಮೇಲ್ಸೇತುವೆ, ಲಗ್ಗೆರೆ ರಿಂಗ್‌ ರಸ್ತೆ ಅಥವಾ ವಿಮಾನ ನಿಲ್ದಾಣ ರಸ್ತೆ ಕಡೆಗೆ ಅಪ್ಪಿತಪ್ಪಿಯೂ ಹೋಗಬೇಡಿ. ಒಂದೊಮ್ಮೆ ಹೋದರೆ ತೊಂದರೆ ಕಟ್ಟಿಟ್ಟಬುತ್ತಿ!

ಇಂಥದೊಂದು ಎಚ್ಚರಿಕೆಯನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ನೀಡಿದ್ದಾರೆ.

ಮಳೆ ಬಂದರೆ ನೀರು ನಿಂತು ವಾಹನ ಸವಾರರಿಗೆ ತಲೆನೋವು ಉಂಟು ಮಾಡುವಂತಹ ಪ್ರಮುಖ ರಸ್ತೆ, ಅಂಡರ್‌ ಪಾಸ್‌ ಹಾಗೂ ಫ್ಲೈಓವರ್‌ಗಳನ್ನು ಪಟ್ಟಿಯನ್ನು ಸಂಚಾರ ಪೊಲೀಸರು ಪಟ್ಟಿಮಾಡಿದ್ದಾರೆ. ಅದರಂತೆ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವ ನಗರದ 43 ಸ್ಥಳಗಳ ಪಟ್ಟಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೀಡಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಿಫಾರಸು ಮಾಡಿದೆ.

ಪಟ್ಟಿಯಲ್ಲಿ ಅಂಡರ್‌ ಪಾಸ್‌ ಮತ್ತು ಫ್ಲೈಓವರ್‌ಗಳ ನೀರು ನಿಲ್ಲುವ ಸಂಖ್ಯೆಯೇ ಹೆಚ್ಚಾಗಿದೆ. ಹಾಗೆಯೇ, ಪೊಲೀಸರು ಗುರುತಿಸಿರುವ ಮಳೆ ನೀರುವ ರಸ್ತೆಗಳು ಸಾರ್ವಜನಿಕರು ಹೆಚ್ಚಾಗಿ ಬಳಸುವಂತಹವು. ಹಾಗಾಗಿ, ಈ 43 ಪ್ರಮುಖ ಸ್ಥಳದಲ್ಲಿ ಮಳೆ ನೀರು ನಿಂತು ಉಂಟಾಗುವ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ಬಿಬಿಎಂಪಿಯನ್ನು ಸಂಚಾರ ಪೊಲೀಸ್‌ ವಿಭಾಗ ಕೋರಿದೆ.

ವಿಪರ್ಯಾಸವೆಂದರೆ ಸಂಚಾರ ಪೊಲೀಸರ ವರದಿ ನೀಡಿ ಸುಮಾರು ಎರಡು ತಿಂಗಳು ಕಳೆದಿದೆ, ಆದರೆ ವರದಿಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. 43 ಸ್ಥಳಗಳಲ್ಲಿ ಸಮಸ್ಯೆಯಿದೆ ಎಂದು ವರದಿಯಲ್ಲಿ ಹೇಳಿದರೆ, ಬಿಬಿಎಂಪಿ ಮಾತ್ರ ಈವರೆಗೆ ಕೇವಲ 10 ಕಡೆಗಳಲ್ಲಿ ಹೂಳು ತೆಗೆದು ಮಳೆ ನೀರು ಹರಿದುಹೋಗಲು ದಾರಿ ಮಾಡಿಕೊಟ್ಟಿದೆ.

ರಾಜಾಜಿನಗರ ಅಂಡರ್‌ ಪಾಸ್‌, ಜಯಮಹಲ್‌ ರಸ್ತೆ, ವಾಟರ್‌ ಟ್ಯಾಂಕ್‌ ರಸ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಹತ್ತು ಕಡೆ ಚರಂಡಿಯ ಹೂಳು ತೆಗೆದು ನೀರು ಹರಿದು ಹೋಗುವಂತೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಉಳಿದಂತೆ 33 ಸ್ಥಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ನಗರದಲ್ಲಿ ಮಳೆ ನೀರು ನಿಂತು ತೊಂದರೆ ಉಂಟಾಗುವ ಸ್ಥಳ ಗುರುತಿಸಿ ಬಿಬಿಎಂಪಿಗೆ ಮಾಹಿತಿ ನೀಡಿ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಶೀಘ್ರ ಅಗತ್ಯ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ.

-ಪಿ.ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತರು, ನಗರ ಸಂಚಾರ ಪೊಲೀಸ್‌ ವಿಭಾಗ.

 

ಸಂಚಾರ ಪೊಲೀಸರು ಗುರುತಿಸಿರುವ ಕೆಲ ಪ್ರಮುಖ ಸ್ಥಳಗಳಲ್ಲಿ ಬಿಬಿಎಂಪಿ ಈಗಾಗಲೇ ಸಮಸ್ಯೆ ಪರಿಹಾರ ಕ್ರಮ ಕೈಗೊಂಡಿದೆ. ಉಳಿದ ಕಡೆಗಳಲ್ಲಿಯೂ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

- ಗಂಗಾಂಬಿಕೆ, ಬಿಬಿಎಂಪಿ ಮೇಯರ್‌

 

ಸಂಚಾರಿ ದಟ್ಟಣೆ ಆಗುವ ಆ 43 ಸ್ಥಳಗಳು:

- ವಿಜಿನಾಪುರ ಅಂಡರ್‌ ಪಾಸ್‌

- ಕೆಂಪೇಗೌಡ ಅಂಡರ್‌ ಪಾಸ್‌

- ರಾಜಾಜಿನಗರ ಅಂಡರ್‌ ಪಾಸ್‌

- ರಿಂಗ್‌ರೋಡ್‌ನ ಆರ್‌.ಎಂ.ನಗರ ಜಂಕ್ಷನ್‌ ಅಂಡರ್‌ ಪಾಸ್‌

- ಲೌರಿ ರೈಲ್ವೆ ಅಂಡರ್‌ ಪಾಸ್‌

- ಯುಎಎಸ್‌ ಅಂಡರ್‌ ಪಾಸ್‌

- ಹೆಬ್ಬಾಳ ಫ್ಲೈಓವರ್‌

- ಭೂಪಸಂದ್ರ ಕ್ರಾಸ್‌

- ದೊಡ್ಡನೆಕುಂದಿ ಫ್ಲೈಓವರ್‌ ಕೆಳಭಾಗ

- ರಾಮಮೂರ್ತಿನಗರದ ಅಂಬೇಡ್ಕರ್‌ ಕಾಲೋನಿ ಬಳಿ

- ಹೆಬ್ಬಾಳ ಫ್ಲೈಓವರ್‌ ಡೌನ್‌ ರಾರ‍ಯಂಪ್‌ ತುಮಕೂರು ಕಡೆ

- ಎಂ.ಎಂ.ಟೆಂಪಲ್‌ ಸಿಗ್ನಲ್‌

- ಟಿ.ಸಿ.ಪಾಳ್ಯ ಜಂಕ್ಷನ್‌

- ಹಳೆ ಮದ್ರಾಸ್‌ ರಸ್ತೆಯ ಪೈ ಲೇಔಟ್‌

- ವೀರಸಂದ್ರ ಜಂಕ್ಷನ್‌

- ಇನ್ಪೋಸಿಸ್‌ 1ನೇ ಗೇಟ್‌ ಮುಂಭಾಗ

- ಲಗ್ಗೆರೆ ಬಸ್‌ ನಿಲ್ದಾಣ

- ಬಿ.ಬಿ.ರಸ್ತೆ

- ಯೋಗೇಶ್ವರ ನಗರ ರಿಂಗ್‌ ರಸ್ತೆ ಕ್ರಾಸ್‌

- ಕೆಂಪಾಪುರ ಫ್ಲೈಓವರ್‌ ಕೆಳಭಾಗ

- ರಿಂಗ್‌ ರಸ್ತೆ ವೀರಣ್ಣಪಾಳ್ಯ ಡೌನ್‌ ರಾರ‍ಯಂಪ್‌

- ಬಿಇಎಲ್‌ ಸರ್ಕಲ್‌

- ಆರ್‌.ಕೆ.ಹೆಗಡೆ ನಗರ ಮುಖ್ಯ ರಸ್ತೆ

- ಬಾಗಲೂರು ಮುಖ್ಯ ರಸ್ತೆಯ ಬಿಗ್‌ ಮಾರುಕಟ್ಟೆಬಳಿ

- ಬಿ.ಬಿ.ರಸ್ತೆಯ ಮಾರಿಯಮ್ಮ ದೇವಸ್ಥಾನ

- ಚಿಕ್ಕಜಾಲಕೋಟೆ ಕ್ರಾಸ್‌

- ಎಂಐಐಟಿ ಕ್ರಾಸ್‌

- ಕೊತ್ತನೂರು ಪೊಲೀಸ್‌ ಠಾಣೆ ಮುಂಭಾಗ

- ಬಿ.ಬಿ.ರಸ್ತೆಯ ದೇವನಹಳ್ಳಿ ಬೈಪಾಸ ಹತ್ತಿರ

- ಗುಬ್ಬಿ ಕ್ರಾಸ್‌

- ಕೋಗಿಲು-ಬೆಳ್ಳುಳ್ಳಿ ಮುಖ್ತ ರಸ್ತೆ

- ಯಲಹಂಕದ ರೈತರ ಸಂತೆ ಬ್ರಿಡ್ಜ್‌ ಕಳೆಭಾಗ

- ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ರಸ್ತೆ

- ಡಿ.ಬಿ.ಪುರ ರಸ್ತೆ

- ಜಯಮಹಲ್‌ ರಸ್ತೆಯ ಪ್ಯಾಲೇಟ್‌ ಹೋಟಲ್‌ ಹಿಂಭಾಗ

- ಕಂಟೋನ್‌ಮೆಂಟ್‌ ರೈಲ್ವೆ ನಿಲ್ದಾಣದ ಅಂಡರ್‌ ಪಾಸ್‌

- ವಾಟರ್‌ ಟ್ಯಾಂಕ್‌ ಜಂಕ್ಷನ್‌

- ಅಮಾನುಲ್ಲಾ ಗೇಟ್‌ ಮುಂಭಾಗ

- ಸಿಎಎಲ್‌ ಕ್ರಾಸ್‌

- ಸರ್ಕಸ್‌ ಗೇಟ್‌ ಮುಂಭಾಗ

- ಜೆ.ಸಿ.ರಸ್ತೆಯ ಮುಬಾರಕ್‌ ಮಸೀದಿ ಮುಂಭಾಗ

- ಸಂಜಯ್‌ನಗರ ಆನಂದ್‌ ಭವನ ಹೋಟಲ್‌ ಮುಂಭಾಗ

- ಸಿಬಿಐ ಬಸ್‌ ನಿಲ್ದಾಣ