ಸರ್ಕಾರಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ನಿಟ್ಟಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ಮುಖಂಡರು ಆಗ್ರಹಿಸಿದ್ದಾರೆ.
ಬೆಂಗಳೂರು : ತಮಿಳುನಾಡು ರಾಜಕಾರಣದ ವಿಚಾರವಾಗಿ ಇದೀಗ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ರಾಜೀನಾಮೆಗೆ ಆಗ್ರಹಿಸಲಾಗಿದೆ.
ಪನ್ನೀರ್ ಸೆಲ್ವಂ ಅವರ ಸಹೋದರ ಬಾಲಮುರುಗನ್ ಅವರನ್ನು ಮಿಲಿಟರಿ ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ದಿರುವುದು ಇದೀಗ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಜುಲೈ ಮೊದಲ ವಾರದಲ್ಲಿ ಚೆನ್ನೈನಿಂದ ಮಧುರೈ ಆಸ್ಪತ್ರೆಗೆ ಕರೆದೊಯ್ಯಲು ಆದೇಶ ನೀಡಿದ್ದರು. ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಬೇಕು ಎಂದು ಡಿಎಂಕೆ ಮುಖಂಡ ಎಂ.ಕೆ ಸ್ಟಾಲಿನ್ ಆಗ್ರಹಿಸಿದ್ದಾರೆ.
ಚೆನ್ನೈನಲ್ಲಿ ಇದ್ದ ವೇಳೆ ಅವರ ಸಹೋದರಗೆ ತೀವ್ರ ಅನಾರೋಗ್ಯವಾಗಿದ್ದಾಗಿ ಸಂದೇಶ ಬಂದಿದ್ದು ಈ ವೇಳೆ ಮಿಲಿಟರಿ ಆ್ಯಂಬುಲೆನ್ಸ್ ಬಳಸಲು ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದರು. ಇದರಿಂದ ಮಿಲಿಟರಿ ವಿಮಾನವನ್ನು ಬಳಕೆ ಮಾಡಿಕೊಂಡಿರುವುದು ತಪ್ಪಾಗಿದ್ದು, ಖಾಸಗಿ ಬಳಕೆಗೆ ಸರ್ಕಾರದ ಸೇವೆ ಬಳಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕು ಎಂದು ಸ್ಟಾಲಿನ್ ಅವರು ಆಗ್ರಹಿಸಿದ್ದಾರೆ.
