ಕಾಂಗ್ರೆಸ್‌ ಅಧ್ಯಕ್ಷರಾಗಲು ಬಹಳ ಹಿಂದಿನಿಂದ ಡಿ.ಕೆ.ಶಿವಕುಮಾರ್‌ ಕಣ್ಣು ರಾಷ್ಟ್ರಮಟ್ಟದ ಜವಾಬ್ದಾರಿ ನಿರ್ವಹಿಸಿ ಹೈಕಮಾಂಡ್‌ ಸಾಮೀಪ್ಯಕ್ಕೆ ಪ್ರಯತ್ನ. ಯಶಸ್ಸನ್ನೇ ಬಿಂಬಿಸಿ ಎಐಸಿಸಿ ಹುದ್ದೆ ಕೊಡಿಸಲು ವಿರೋಧಿ ನಾಯಕರುಗಳ ಲಾಬಿ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಸಿಗುವುದನ್ನು ತಪ್ಪಿಸುವ ರಾಜಕೀಯ ತಂತ್ರ
- ಎಸ್. ಗಿರೀಶ್ಬಾಬು, ಬೆಂಗಳೂರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿ, ಘಟಾನುಘಟಿಗಳು ಅಡ್ಡಗಾಲು ಹಾಕಿದ ಪರಿಣಾಮ ಅಂತಿಮ ಹಂತದಲ್ಲಿ ಹುದ್ದೆ ತಪ್ಪಿಸಿಕೊಂಡಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿಯಲ್ಲಿ ಪ್ರಮುಖ ಹುದ್ದೆ ದೊರಕಿಸಿಕೊಡುವ ಪ್ರಯತ್ನ ನಡೆದಿದೆ.
ಕುತೂಹಲಕಾರಿ ಸಂಗತಿಯೆಂದರೆ, ಶಿವಕುಮಾರ್ ಅವರಿಗೆ ಎಐಸಿಸಿಯಲ್ಲಿ ಹುದ್ದೆ ದೊರಕಿಸಲು ಪ್ರಯತ್ನ ನಡೆಸುತ್ತಿರುವುದು ಅವರ ವಿರೋಧಿ ಗುಂಪು! ಈ ಗುಂಪಿನ ಪ್ರಯತ್ನ ಕೈಗೂಡಿದರೆ ಮಾರ್ಚ್ ವೇಳೆಗೆ ನಡೆಯಲಿರುವ ಎಐಸಿಸಿ ಪುನಾರಚನೆ ವೇಳೆ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗುವ ಎಲ್ಲಾ ಸಾಧ್ಯತೆಯಿದೆ.
ಇತ್ತೀಚೆಗೆ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಸಾಕಷ್ಟು ಕ್ರಿಯಾಶೀಲರಾಗಿ ಹಾಗೂ ರಾಷ್ಟ್ರಮಟ್ಟದ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ಶಿವಕುಮಾರ್ ನಿರ್ವಹಿಸಿದ್ದಾರೆ. ಆ ಮೂಲಕ ಹೈಕಮಾಂಡ್ನ ಸಾಮೀಪ್ಯ ಗಳಿಸಲು ಯತ್ನಿಸುತ್ತಿದ್ದಾರೆ. ಶಿವಕುಮಾರ್ ಅವರ ಈ ತಂತ್ರವನ್ನು ಬಳಸಿಕೊಂಡು ಅವರಿಗೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ಕೊಡಿಸುವ ಮೂಲಕ ಕೆಪಿಸಿಸಿ ಹುದ್ದೆ ಸ್ಪರ್ಧೆಯಿಂದ ಹೊರದೂಡುವ ಪ್ರಯತ್ನವನ್ನು ರಾಜ್ಯದ ಘಟಾನುಘಟಿ ನಾಯಕರು ನಡೆಸುತ್ತಿದ್ದಾರೆ.
ಆ ಚುನಾವಣೆಯಲ್ಲಿ 25 ಕ್ಷೇತ್ರಗಳ ಚುನಾವಣೆ ನಿರ್ವಹಣೆಯ ಹೊಣೆಯನ್ನು ಹೈಕಮಾಂಡ್ ಶಿವಕುಮಾರ್ ಅವರಿಗೆ ವಹಿಸಿತ್ತು. ಇದಾದ ನಂತರ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡಿನಲ್ಲಿ ವಿವಿಧ ಜವಾಬ್ದಾರಿಗಳನ್ನು ಹೈಕಮಾಂಡ್ ಶಿವಕುಮಾರ್ ಅವರಿಗೆ ನೀಡಿತ್ತು. ಮುಂಬರುವ ಗೋವಾ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಪ್ರಚಾರ ಸಮಿತಿಯಲ್ಲೂ ಶಿವಕುಮಾರ್ ಅವರಿಗೆ ಸ್ಥಾನ ನೀಡಲಾಗಿದೆ.
ಹೀಗೆ ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ಸಾಕಷ್ಟುಕ್ರಿಯಾಶೀಲವಾಗಿದ್ದಾರೆ. ಇದನ್ನು ದೆಹಲಿಯಲ್ಲಿ ಪ್ರಭಾವಿಗಳಾಗಿರುವ ರಾಜ್ಯದ ನಾಯಕರು ಹಾಗೂ ರಾಜ್ಯದ ಉನ್ನತ ಪದವಿಯಲ್ಲಿರುವ ನಾಯಕರು ಬಳಸಿಕೊಳ್ಳಲು ಮುಂದಾಗಿದ್ದು, ಶಿವಕುಮಾರ್ ಅವರಿಗೆ ರಾಷ್ಟ್ರಮಟ್ಟದ ಜವಾಬ್ದಾರಿ ನೀಡುವುದು ಉತ್ತಮ ಎಂದು ಹೈಕಮಾಂಡ್ನಲ್ಲಿ ಬಿಂಬಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಸಹ ಇದಕ್ಕೆ ಪೂರಕವಾಗಿಯೇ ನಡೆದುಕೊಂಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ರಾಜ್ಯದಿಂದ ಈ ಬಾರಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿತರಾಗುತ್ತಿರುವವರ ಪಟ್ಟಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಉನ್ನತ ಮೂಲಗಳು ಸುವರ್ಣ ನ್ಯೂಸ್ ಸೋದರ ಪತ್ರಿಕೆ ಕನ್ನಡಪ್ರಭಕ್ಕೆ ತಿಳಿಸಿವೆ.
ಅಧ್ಯಕ್ಷ ಗಾದಿ ತಪ್ಪಿಸಿದ ಘಟಾನುಘಟಿಗಳು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಹುದ್ದೆಯಲ್ಲಿ ಆರು ವರ್ಷ ಪೂರ್ಣಗೊಳಿಸಿದ ಹಂತದಲ್ಲಿ ಅವರನ್ನು ಬದಲಾಯಿಸಿ ಲಿಂಗಾಯತ ಸಮುದಾಯದವರನ್ನು ಅಧ್ಯಕ್ಷ ಹುದ್ದೆಗೆ ತರಲು ಸಿಎಂ ಬಣ ಪ್ರಯತ್ನ ನಡೆಸಿತ್ತು. ಆಗ ಇಂಧನ ಸಚಿವ ಸ್ಥಾನವನ್ನು ಉಳಿಸಿಕೊಂಡು ಕೆಪಿಸಿಸಿ ಅಧ್ಯಕ್ಷರಾಗಲು ಡಿ.ಕೆ. ಶಿವಕುಮಾರ್ ತೀವ್ರ ಪ್ರಯತ್ನ ನಡೆಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ಶಿವಕುಮಾರ್ ನಡೆಸಿದ ಲಾಬಿ ಫಲ ಕೊಡುವ ಲಕ್ಷಣಗಳು ಕಂಡುಬರತೊಡಗಿದ್ದವು. ಇದು ಸಿಎಂ ಬಣಕ್ಕೆ ರುಚಿಸಲಿಲ್ಲ. ಸುಲಭಕ್ಕೆ ಯಾರ ಅಭಿಪ್ರಾಯವನ್ನೂ ಒಪ್ಪದ ಶಿವಕುಮಾರ್ ಅವರಿಗಿಂತ ಹಾಲಿ ಅಧ್ಯಕ್ಷ ಪರಮೇಶ್ವರ್ ಅವರೇ ಗಾದಿಯಲ್ಲಿ ಮುಂದುವರೆಯುವುದು ಉತ್ತಮ ಎಂಬ ನಿಲುವಿಗೆ ಸಿಎಂ ಬಣ ಬಂದಿತ್ತು.
ಇದೇ ವೇಳೆ ಸಿಎಂ ವಿರುದ್ಧ ಸಿಡಿದೆದ್ದ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಪಕ್ಷ ತ್ಯಜಿಸಿದರು. ಇದನ್ನು ಬಳಸಿಕೊಂಡ ಸಿಎಂ ಬಣ, ಶ್ರೀನಿವಾಸಪ್ರಸಾದ್ ಪಕ್ಷ ತ್ಯಜಿಸಿದ್ದರಿಂದ ಪಕ್ಷದ ವಿರುದ್ಧ ದಲಿತರಿಗೆ ಅಸಮಾಧಾನವಿದೆ. ಇದೇ ಹಂತದಲ್ಲಿ ದಲಿತ ಸಮುದಾಯದ ಪರಮೇಶ್ವರ್ ಅವರನ್ನು ಬದಲಾಯಿಸಿದರೆ ಇಡೀ ಸಮುದಾಯ ಪಕ್ಷದ ವಿರುದ್ಧ ಮುನಿಯಬಹುದು ಎಂಬ ಕಾರಣವನ್ನು ಹೈಕಮಾಂಡ್ಗೆ ನೀಡಿತು. ಪರಮೇಶ್ವರ್ ಅವರು ಸಹ ಗೃಹ ಖಾತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ತಮ್ಮದೇ ಆದ ಪ್ರಯತ್ನ ನಡೆಸಿದ್ದರು.
ರಾಜ್ಯದ ಇತರ ಪ್ರಮುಖ ನಾಯಕರಾದ ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ (ಮುನಿಯಪ್ಪ ತಾವೇ ಅಧ್ಯಕ್ಷರಾಗಲು ಯತ್ನ ನಡೆಸಿದ್ದರು) ಅವರು ಸಹ ಶಿವಕುಮಾರ್ ವಿರುದ್ಧ ಲಾಬಿ ನಡೆಸಿದ್ದರು.ಇದೆಲ್ಲದರ ಪರಿಣಾಮ ಶಿವಕುಮಾರ್ ಅವರಿಗೆ ಹುದ್ದೆ ನೀಡುವ ಪರಿಶೀಲನೆಯಲ್ಲಿದ್ದ ಹೈಕಮಾಂಡ್, ಘಟಾನುಘಟಿಗಳ ವಿರೋಧದಿಂದ ಹಾಲಿ ಅಧ್ಯಕ್ಷರನ್ನೇ ಮುಂದುವರೆಸಲು ನಿರ್ಧರಿಸಿತು. ಜತೆಗೆ, ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸುವ ಮೂಲಕ ಆಗಷ್ಟೇ ಸಚಿವ ಸ್ಥಾನ ವಂಚಿತರಾಗಿದ್ದ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ಕಲ್ಪಿಸಿತು.
ಇದರಿಂದ ಸಹಜವಾಗಿಯೇ ನಿರಾಶರಾದ ಡಿ.ಕೆ.ಶಿವಕುಮಾರ್ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಆಗ ಹೈಕಮಾಂಡ್ ನೀಡಿತ್ತು. ಇದನ್ನು ಬಳಸಿಕೊಳ್ಳಲು ಮುಂದಾಗಿರುವ ಘಟಾನುಘಟಿಗಳು ಶಿವಕುಮಾರ್ ಅವರಿಗೆ ಎಐಸಿಸಿ ಹುದ್ದೆ ನೀಡುವಂತೆ ಹೈಕಮಾಂಡ್ ಮನವೊಲಿಸಲು ಮುಂದಾಗಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.
(ಕನ್ನಡಪ್ರಭ ವಾರ್ತೆ)
