ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಂಚೋಳಿಗೆ ಆಗಮಿಸಿದ್ದ ಸಚಿವ ಡಿಕೆ ಶಿವಕುಮಾರ್‌ ಅವರಿಗೆ ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಚಿಂಚೋಳಿ ಬಿಜೆಪಿ ನಗರಾಧ್ಯಕ್ಷ ಸಂತೋಷ ಗಡಂತಿ ನೇತೃತ್ವದಲ್ಲಿ ಕಾರ್ಯಕರ್ತರು ಘೇರಾವ್‌ ಹಾಕಲು ಬಂದಿದ್ದರು.

ಕಲಬುರಗಿ(ಫೆ.25): ತಮಗೆ ಘೇರಾವ್ ಹಾಕಲು ಬಂದ ಬಿಜೆಪಿ ಕಾರ್ಯಕರ್ತರಿಗೆ ಇಂಧನ ಸಚಿವ ಡಿಕೆಶಿ ಅವಾಜ್ ಹಾಕಿದ ಘಟನೆ ಜಿಲ್ಲೆಯ ಚಿಂಚೋಳಿಯಲ್ಲಿ ನಡೆದಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಂಚೋಳಿಗೆ ಆಗಮಿಸಿದ್ದ ಸಚಿವ ಡಿಕೆ ಶಿವಕುಮಾರ್‌ ಅವರಿಗೆ ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಚಿಂಚೋಳಿ ಬಿಜೆಪಿ ನಗರಾಧ್ಯಕ್ಷ ಸಂತೋಷ ಗಡಂತಿ ನೇತೃತ್ವದಲ್ಲಿ ಕಾರ್ಯಕರ್ತರು ಘೇರಾವ್‌ ಹಾಕಲು ಬಂದಿದ್ದರು.
ಈ ವೇಳೆ ಕಾರ್ಯಕರ್ತರ ವಿರುದ್ಧವೇ ಗುಡುಗಿದ ಸಚಿವರು, 'ಇದೆಲ್ಲ ನನ್ನ ಎದುರು ನಡೆಯಲ್ಲ, ಇದನ್ನೆಲ್ಲಾ ಬಿಟ್ಟುಬಿಡಿ'. ಇಡೀ ರಾಜ್ಯದಲ್ಲಿ ನಿಮ್ಮ ಒಬ್ಬ ಲೀಡರ್'ನನ್ನ ಪ್ರಶ್ನಿಸಲಾಗಲ್ಲ ಎಂದು ಹರಿಹಾಯ್ದರು. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಲಿ,ನಂತರ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ. ಬಿಡುಗಡೆಯಾಗಿರುವ ಡೈರಿ ನಿಜವಾದ ಡೈರಿಯಲ್ಲ. ಹೊಸದಾಗಿ ಸೃಷ್ಟಿಸಲಾಗಿರುವ ಡೈರಿ ಇದು. ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ನಕಲಿ ಡೈರಿ ಸೃಷ್ಟಿಸಿದೆ. ಯಾರೂ ಹೆಸರು ಬರೆದಿಟ್ಟಕೊಂಡು ಹಣ ಕೊಡುವುದಿಲ್ಲ. ಕೆಲ ರಾಜ್ಯಗಳ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಬಿಜೆಪಿ ಈ ಸುಳ್ಳಿನ ಕಂತೆ ಸೃಷ್ಟಿಸಿದೆ. ಇದರಿಂದ ಅವರಿಗೇನೂ ಲಾಭವಾಗದು ಅವರಿಗೆ ಭ್ರಮನಿರಶನವಾಗೋದು ಗ್ಯಾರಂಟಿ ಎಂದರು. ಈ ಕುರಿತು ಯಾವುದೇ ರೀತಿಯ ತನಿಖೆಗೆ ಕಾಂಗ್ರೆಸ್‌ ಸಿದ್ದವಿದೆ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನಗೂ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದು, ಈ ಡೈರಿ ಸುಳ್ಳಿನ ಕಂತೆ ಎಂದು ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.

ನಾನು ವಕ್ತಾರನಲ್ಲ

'ಹೈಕಮಾಂಡ್ ಮೇಲೆ ನಿಯಂತ್ರಣ ಪಡೆಯಲು ಸಿದ್ದರಾಮಯ್ಯ ಹಣ ನೀಡಿದ್ರೂ ನೀಡಿರಬಹುದು ಎಂಬ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆಸಲು ಡಿಕೆಶಿ ನಿರಾಕರಿಸಿದರು. ನಾನು ಯಾರಿಗೂ ವಕ್ತಾರನಾಗೋಕೆ ಸಿದ್ಧದನಿಲ್ಲ. ಅವರ ಹೇಳಿಕೆ ಬಗ್ಗೆ ಅವರನ್ನೆ ಕೇಳಿ ಎಂದು ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.