ಈ ಬಾರಿ ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ಜೆಡಿಎಸ್ ಪಕ್ಷದೊಂದಿಗೆ ನನ್ನ ನೇತೃತ್ವದಲ್ಲೇ ಮಾತುಕತೆ ನಡೆಸುತ್ತೇನೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಬೇಗೂರು ವಾರ್ಡ್‌ನ ಸದಸ್ಯ ಆಂಜಿನಪ್ಪ ಅಥವಾ ಲಕ್ಷ್ಮೀದೇವಿನಗರ ವಾರ್ಡ್‌ನ ವೇಲು ನಾಯಕರ್ ಇಬ್ಬರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಬೇಕು.

ಬೆಂಗಳೂರು(ಸೆ.21): ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಬಿಎಂಪಿ ಸದಸ್ಯರಾದ ವೇಲುನಾಯಕರ್ ಅಥವಾ ಆಂಜಿನಪ್ಪ ಅವರನ್ನು ಮೇಯರ್ ಸ್ಥಾನಕ್ಕೆ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ಏನು ಬೇಕಾದರೂ ನಡೆಯಬಹುದು ಎಂದು ಸಂಸದ ಡಿ.ಕೆ. ಸುರೇಶ್ ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದನಾಗಿ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಮೇಯರ್ ಹುದ್ದೆ ಬೇಕು ಎಂದು ಹಕ್ಕು ಪ್ರತಿಪಾದಿಸುತ್ತಿದ್ದೇನೆ. ಬಂಡಾಯ ಎಂದುಕೊಂಡರೂ ಪರವಾಗಿಲ್ಲ. ಅಧಿಕಾರ ಹಂಚಿಕೆ, ಅಭಿವೃದ್ಧಿ ಸೇರಿದಂತೆ ಎಲ್ಲದರಲ್ಲೂ ನಮ್ಮನ್ನು ಕಡೆಗಣಿಸಲಾಗಿದೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಗೂ ನಮಗೆ ಆಹ್ವಾನ ನೀಡಿಲ್ಲ ಎಂದು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಬಾರಿ ಮೇಯರ್ ಚುನಾವಣೆ ನಡೆದಾಗಲೂ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಈ ಬಾರಿ ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ಜೆಡಿಎಸ್ ಪಕ್ಷದೊಂದಿಗೆ ನನ್ನ ನೇತೃತ್ವದಲ್ಲೇ ಮಾತುಕತೆ ನಡೆಸುತ್ತೇನೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಬೇಗೂರು ವಾರ್ಡ್‌ನ ಸದಸ್ಯ ಆಂಜಿನಪ್ಪ ಅಥವಾ ಲಕ್ಷ್ಮೀದೇವಿನಗರ ವಾರ್ಡ್‌ನ ವೇಲು ನಾಯಕರ್ ಇಬ್ಬರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಬೇಕು. ಸಂಸದನಾಗಿ ನನ್ನನ್ನು ಪರಿಗಣಿಸದಿದ್ದರೆ ಮುಂದೆ ಏನಾದರೂ ಆಗಬಹುದು ಎಂದು ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿಗೆ ವ್ಯಾಪ್ತಿಗೆ ಹೊಸದಾಗಿ ಸೇರಿರುವ ಪ್ರದೇಶವಾದ ಆರ್.ಆರ್. ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳು ವಿಫಲವಾಗಿದ್ದಾರೆ. ಹೀಗಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಕ್ಷೇತ್ರದವರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಮೇಯರ್ ಬಗ್ಗೆ ಈಗಾಗಲೇ ಕೆಲವು ನಾಯಕರ ಜತೆ ಚರ್ಚಿಸಿದ್ದೇನೆ. ನಮ್ಮ ಮನವಿಗೆ ವರಿಷ್ಠರು ಸ್ಪಂದಿಸಬೇಕು. ಕೇವಲ ಮಲ್ಲೇಶ್ವರ, ಗಾಂಧಿನಗರ ವಿ‘ಧಾನಸಭಾ ಕ್ಷೇತ್ರಗಳನ್ನು ಮಾತ್ರ ಪರಿಗಣಿಸಬಾರದು. ನಮ್ಮ ಕ್ಷೇತ್ರಗಳ ಬಗ್ಗೆ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.