'2.50 ರು.ಗೆ ವಿದ್ಯುತ್ ಖರೀದಿಗೆ ಸಿದ್ಧ, ದಿನಾಂಕ ನಿಗದಿ ಮಾಡಿ'
ಬೆಂಗಳೂರು: ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪ್ರತಿ ಯೂನಿಟ್‌ಗೆ 2.50 ರು.ನಂತೆ ನೀಡಲು ಸಿದ್ಧವಿದ್ದರೆ ರಾಜ್ಯ ಖರೀದಿಸಲು ಸಿದ್ಧವಾಗಿದೆ.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಭೇಟಿ ಮಾಡಲು ದಿನಾಂಕ ನಿಗದಿಪಡಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪತ್ರ ಮುಖೇನ ಸವಾಲು ಹಾಕಿದ್ದಾರೆ.
ಇದಲ್ಲದೆ ಕೇಂದ್ರ ಯೂನಿಟ್‌ಗೆ 4 ರು.ಗಿಂತಲೂ ಹೆಚ್ಚಿನ ದರದಲ್ಲಿ ವಿದ್ಯುತ್ ನೀಡುವ ಪ್ರಸ್ತಾವನೆ ಮಾಡಿದೆಯೇ ಹೊರತು 2.50 ರು. ಸರಬರಾಜು ಮಾಡುವ ಪ್ರಸ್ತಾವನೆಯನ್ನು ಎಂದಿಗೂ ತಿಳಿಸಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ಯೂನಿಟ್‌ಗೆ 2.50 ರು. ನಂತೆ ವಿದ್ಯುತ್ ನೀಡಲು ತಯಾರಿದ್ದರೂ ರಾಜ್ಯ ಸರ್ಕಾರ ಖಾಸಗಿ ಕಂಪೆನಿಗಳಿಂದ ದುಬಾರಿ ದರದಲ್ಲಿ ವಿದ್ಯುತ್ ಖರೀದಿಸುತ್ತಿದೆ ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ ಸಚಿವ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ 2.50 ರು ನಂತೆ ಅಥವಾ ರಾಜ್ಯಕ್ಕೆ ಹಾಲಿ ವಿದ್ಯುತ್ ಸರಬರಾಜು ಮಾಡುತ್ತಿರುವ ಬೇರೆ ಮೂಲಗಳಿಂದ ಕಡಿಮೆ ದರದಲ್ಲಿ ರಾಜ್ಯಕ್ಕೆ ವಿದ್ಯುತ್ ಸರಬರಾಜು ಮಾಡಲು ಸಿದ್ಧವಿದ್ದರೆ ಮತ್ತು ಹೊರಗಡೆಯಿಂದ ರಾಜ್ಯಕ್ಕೆ ವಿದ್ಯುತ್ ಸರಬರಾಜು ಮಾಡಲು ಕಾರಿಡಾರ್ ಸೌಲಭ್ಯವನ್ನು ಒದಗಿಸಿದ್ದಲ್ಲಿ ರಾಜ್ಯಕ್ಕೆ ಬೇಕಾದ ಸಂಪೂರ್ಣ ವಿದ್ಯುತ್‌ನ್ನು ಕೇಂದ್ರ ಸರ್ಕಾರದಿಂದಲೇ ಖರೀದಿಸಲು ಸಿದ್ಧ ಎಂದಿದ್ದಾರೆ.
