ಬೆಂಗಳೂರು :  ತಮಿಳುನಾಡು ಜತೆ ನಮಗೆ ಮನಸ್ತಾಪ, ತಗಾದೆ ಬೇಕಿಲ್ಲ. ಆದರೆ ಯಾವುದೇ ಕಾರಣಕ್ಕೂ ಯೋಜನೆ ಕೈ ಬಿಟ್ಟು ರಾಜ್ಯದ ಹಿತ, ಹಕ್ಕು ಬಲಿ ಕೊಡಲು ನಾವು ಸಿದ್ಧರಿಲ್ಲ. ಯೋಜನೆಯಿಂದ ತಮಿಳುನಾಡಿಗೆ ಇರುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡಲು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರ ಭೇಟಿಗೆ ಸಮಯವಕಾಶ ಕೋರಿ ಪತ್ರ ಬರೆದಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಮೇಕೆದಾಟು ಕುಡಿಯುವ ನೀರು ಯೋಜನೆ ಕುರಿತು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಹಾಗೂ ಕರ್ನಾಟಕ ನಡುವೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಅನಾನುಕೂಲ ಇಲ್ಲ ಎಂಬುದನ್ನು ಸಾಬೀತು ಪಡಿಸಲು ಪರಸ್ಪರ ಎರಡೂ ರಾಜ್ಯಗಳ ನಡುವೆ ಚರ್ಚೆಗೆ ವೇದಿಕೆ ಕಲ್ಪಿಸಿಕೊಡಬೇಕು ಎಂದು ಕೇಂದ್ರ ಜಲಸಂಪನ್ಮೂಲ ಸಚಿವರಿಗೂ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಉಭಯ ರಾಜ್ಯಗಳಿಗೂ ಕಾವೇರಿ ಜೀವ ನದಿ. ಹೀಗಾಗಿ ಕಾವೇರಿ ವಿವಾದದ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಮಾತುಕತೆಗೆ ಆಹ್ವಾನಿಸಿದ್ದೇವೆ. ಸ್ಥಳ ಪರಿಶೀಲನೆಗೆ ಬರುವಂತೆಯೂ ತಮಿಳುನಾಡು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ ಎಂದರು.

ತಮಿಳುನಾಡಿಗೆ ಹೆಚ್ಚು ಲಾಭ ಹೇಗೆ?

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲ ಆಗುತ್ತದೆ. ಆದರೆ, ಯೋಜನೆ ಬಗ್ಗೆ ಸಂಭ್ರಮಿಸುವ ಬದಲು ತಮಿಳುನಾಡು ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದೆ. ತಮಿಳುನಾಡು ಮೇಕೆದಾಟು ವಿಚಾರ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವುದು ದಿಗ್ಭ್ರಮೆ ಮೂಡಿಸಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕು. ಉತ್ತಮ ಮಳೆ ಹಿನ್ನೆಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಕರ್ನಾಟಕ 397 ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ. ಆದರೆ ತಮಿಳುನಾಡು ಬಳಕೆ ಮಾಡಿಕೊಂಡಿದ್ದು ಕೇವಲ 150 ಟಿಎಂಸಿ ಮಾತ್ರ. ಉಳಿದ 247 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯಲು ಬಿಟ್ಟು ಪೋಲು ಮಾಡಿದೆ.

ಈಗ ಮೇಕೆದಾಟುವಿನಲ್ಲಿ ನಾವು ನಿರ್ಮಿಸಲಿರುವ ಬ್ಯಾಲೆನ್ಸಿಂಗ್‌ ಜಲಾಶ​ಯದಿಂದ ಯೋಜನೆಯಿಂದ 60 ಟಿಎಂಸಿ ನೀರು ಸಂಗ್ರಹಿಸಬಹುದು. ಈ ನೀರಿನಿಂದ ವಿದ್ಯುತ್‌ ಉತ್ಪಾದನೆ ಮಾಡಿ ಬಳಿಕ ತಮಿಳುನಾಡಿಗೇ ನೀರನ್ನು ಹರಿಸಲಾಗುವುದು. ನಾವು ಯಾವುದೇ ನೀರಾವರಿ ಯೋಜನೆಗೂ ಈ ನೀರನ್ನು ಬಳಸುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಹೀಗಾಗಿ ನಮ್ಮ ಹಣದಿಂದ ಯೋಜನೆ ಮಾಡಿ ನಿಮಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ದಯವಿಟ್ಟು ನಮ್ಮ ರಾಜ್ಯಕ್ಕೆ ಬಂದು ಯೋಜನೆ ಪರಿಶೀಲಿಸಿ, ಸುಖಾಸುಮ್ಮನೆ ರಾಜಕೀಯ ಕಾರಣಕ್ಕೆ ವಿರೋಧಿಸಬೇಡಿ ಎಂದು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದರು.