ಐಟಿ ದಾಳಿಯ ಬಳಿಕ ಸಚಿವ ಡಿ.ಕೆ. ಶಿವಕುಮಾರ್ ತಾವೇನೂ ಮಾನಸಿಕವಾಗಿ ಕುಸಿದಿಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಿನ್ನೆ ರಾತ್ರಿ ರೆಸಾರ್ಟ್'ನಲ್ಲೇ ಉಳಿದಿದ್ದ ಡಿ.ಕೆ. ಶಿವಕುಮಾರ್ ಗುಜರಾತ್ ಶಾಸಕರ ಜೊತೆ ಸಮಯ ‌ಕಳೆದಿದ್ದಾರೆ. ಈ ಮಧ್ಯೆ ಗುಜರಾತ್ ಕಾಂಗ್ರೆಸ್ ಶಾಸಕರ ವಾಪಸಾಗುವಿಕೆ ಇಂದು ನಿರ್ಧಾರವಾಗಲಿದೆ.
ಬೆಂಗಳೂರು(ಆ.06): ಐಟಿ ದಾಳಿಯ ಬಳಿಕ ಸಚಿವ ಡಿ.ಕೆ. ಶಿವಕುಮಾರ್ ತಾವೇನೂ ಮಾನಸಿಕವಾಗಿ ಕುಸಿದಿಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಿನ್ನೆ ರಾತ್ರಿ ರೆಸಾರ್ಟ್'ನಲ್ಲೇ ಉಳಿದಿದ್ದ ಡಿ.ಕೆ. ಶಿವಕುಮಾರ್ ಗುಜರಾತ್ ಶಾಸಕರ ಜೊತೆ ಸಮಯ ಕಳೆದಿದ್ದಾರೆ. ಈ ಮಧ್ಯೆ ಗುಜರಾತ್ ಕಾಂಗ್ರೆಸ್ ಶಾಸಕರ ವಾಪಸಾಗುವಿಕೆ ಇಂದು ನಿರ್ಧಾರವಾಗಲಿದೆ.
ರೆಸಾರ್ಟ್ ನಲ್ಲಿ ಡಿಕೆಶಿ
ಮೂರು ದಿನಗಳ ಐಟಿ ದಾಳಿಯ ವೇಳೆ ಗೃಹಬಂಧನದಲ್ಲಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇದೀಗ ತಾವೇನೂ ಮಾನಸಿಕವಾಗಿ ಕುಗ್ಗಿಲ್ಲ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ನಿನ್ನೆ ಇಡೀ ದಿನ ಕಾಂಗ್ರೆಸ್ ಶಾಸಕರ ಜೊತೆ ಇದ್ದ ಡಿ.ಕೆ. ಶಿವಕುಮಾರ್, ರಾತ್ರಿ ರೆಸಾರ್ಟ್ ನಲ್ಲೇ ಉಳಿದುಕೊಂಡಿದ್ದಾರೆ. ಗುಜರಾತ್ ಶಾಸಕರನ್ನು ವಾಪಸ್ ಕಳುಹಿಸುವ ವಿಚಾರವಾಗಿ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಜೊತೆ ದೂರವಾಣಿ ಮೂಲಕ ಚರ್ಚಿಸಿದ್ದು ಆ ಬಗ್ಗೆ ರೆಸಾರ್ಟ್ ನಲ್ಲೇ ಶಾಸಕರ ಜೊತೆ ಸಭೆಯನ್ನೂ ನಡೆಸಿದ್ದಾರೆ.
ಇಂದು ಸಚಿವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದು, ಎರಡು ದಿನಗಳಲ್ಲಿ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಡಿಕೆಶಿ ಆತಿಥ್ಯದಲ್ಲಿ ರೆಸಾರ್ಟ್ ನಲ್ಲಿ ಉಳಿದುಕೊಂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಗುಜರಾತ್ ವಿಧಾನಸಭೆಗೆ ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳುವಂತೆಯೂ ದುಂಬಾಲು ಬಿದ್ದಿದ್ದಾರೆ.
ಇನ್ನು ಐಟಿ ದಾಳಿ ಸಂಬಂಧ ಪಂಚನಾಮೆ ವರದಿ ಬಂದ ಬಳಿಕವಷ್ಟೇ ಪ್ರತಿಕ್ರಿಯಿಸುವುದಾಗಿ ಹೇಳಿರುವ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನೀಡಿರುವ ಪ್ರತಿಕ್ರಿಯೆಗೆ ಕ್ಷಮೆಯಾಚಿಸಿದ್ದಾರೆ.
ಇನ್ನು ರೆಸಾರ್ಟ್ ನಲ್ಲಿರುವ ಶಾಸಕರು ಇಂದು ಒಂದು ದಿನದ ಟ್ರಿಪ್ ಕೈಗೊಳ್ಳುವ ಸಾಧ್ಯತೆ ಇದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಗುಜರಾತ್ ಗೆ ವಾಪಸಾಗಲಿದ್ದಾರೆ.
