ಬೆಂಗಳೂರು[ಆ.31]: ಜಾರಿ ನಿರ್ದೇಶನಾಲಯ (ಇ.ಡಿ.)ದ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಬೆಂಬಲಕ್ಕೆ ಕಾಂಗ್ರೆಸ್‌ ನಾಯಕರು ತಡವಾಗಿ ಧಾವಿಸಿದ್ದಾರೆ.

ಇ.ಡಿ. ತನಿಖೆ ಹಾಗೂ ಅದು ನೀಡಿದ್ದ ನೋಟಿಸ್‌ ರದ್ದತಿ ಕೋರಿ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ ನಂತರ ಶಿವಕುಮಾರ್‌ ಅವರಿಗೆ ಸಂಕಷ್ಟಎದುರಾಗಿದ್ದಲ್ಲದೆ, ಅವರ ಬಂಧನದ ಭೀತಿಯೂ ನಿರ್ಮಾಣವಾಗಿದೆ. ಆದರೆ, ಶಿವಕುಮಾರ್‌ ಪರ ನಿಲ್ಲಲು ಹಿಂಜರಿದಿದ್ದ ಕಾಂಗ್ರೆಸ್‌ ನಾಯಕರು ಶುಕ್ರವಾರ ಮಧ್ಯಾಹ್ನದ ನಂತರ ಶಿವಕುಮಾರ್‌ ಪರ ಪ್ರಬಲ ಸಮರ್ಥನೆಗೆ ಮುಂದಾದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಶುಕ್ರವಾರ ಮಧ್ಯಾಹ್ನದ ಬಳಿಕ ಡಿ.ಕೆ. ಶಿವಕುಮಾರ್‌ ನೆರವಿಗೆ ಧಾವಿಸಿದ್ದು, ಬಿಜೆಪಿ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ. ಟ್ವೀಟ್‌ ಮೂಲಕ ಶಿವಕುಮಾರ್‌ ಪರ ಪ್ರಬಲ ಸಮರ್ಥನೆಗಿಳಿದ ಸಿದ್ದರಾಮಯ್ಯ, ಗುಜರಾತ್‌ ಕಾಂಗ್ರೆಸ್‌ ಶಾಸಕರಿಗೆ ಕರ್ನಾಟಕದಲ್ಲಿ ಆಶ್ರಯ ಕೊಟ್ಟಿದ್ದಕ್ಕಾಗಿ ಕೇಂದ್ರ ಸರ್ಕಾರ ಐಟಿ-ಇ.ಡಿ. ದುರ್ಬಳಕೆ ಮಾಡಿಕೊಂಡು ಡಿ.ಕೆ. ಶಿವಕುಮಾರ್‌ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

5 ಗಂಟೆಗಳ ವಿಚಾರಣೆ ಮುಕ್ತಾಯ.. ಹೊರಬಂದ ಡಿಕೆಶಿ ಒಂದೇ ಮಾತು!

ಡಿ.ಕೆ. ಅವರು ತಪ್ಪು ಮಾಡಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ತನಿಖಾ ಸಂಸ್ಥೆಗಳನ್ನು ದ್ವೇಷ ಸಾಧನೆಗೆ ದುರುಪಯೋಗ ಮಾಡುತ್ತಿರುವುದು ಖಂಡನಾರ್ಹ. ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಕುಮಾರ್‌ ಪ್ರಕರಣವನ್ನು ಕೇಂದ್ರದ ಮಾಜಿ ಸಚಿವ ಚಿದಂಬರಂ ಪ್ರಕರಣಕ್ಕೆ ಹೋಲಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಇದು ಚಿದಂಬರಂ ರೀತಿಯ ಪ್ರಕರಣವಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಇಷ್ಟಕ್ಕೂ ಇ.ಡಿ. ತನಿಖೆ ರದ್ದುಪಡಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ರದ್ದುಪಡಿಸಿರುವುದರಿಂದ ಶಿವಕುಮಾರ್‌ ಈ ಬಗ್ಗೆ ಸುಪ್ರೀಂಕೋರ್ಟ್‌ ಮೊರೆ ಹೋಗಲಿದ್ದಾರೆ. ಇದರ ನಡುವೆಯೇ ಕೆಲವರು ತೀರ್ಪು ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಡಿಕೆಶಿ ಬೆಂಬಲಕ್ಕೆ ಕಾಂಗ್ರೆಸ್ಸಿದೆ: ದಿನೇಶ್‌

ಶುಕ್ರವಾರ ಸಂಜೆ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಗುಜರಾತ್‌ ಕಾಂಗ್ರೆಸ್‌ ಶಾಸಕರಿಗೆ ಕರ್ನಾಟಕದಲ್ಲಿ ಆಶ್ರಯ ಕೊಟ್ಟಿದ್ದಕ್ಕಾಗಿ ಬಿಜೆಪಿ ದ್ವೇಷ ರಾಜಕಾರಣಕ್ಕೆ ಹೋಗುತ್ತಿದೆ. ಡಿ.ಕೆ. ಶಿವಕುಮಾರ್‌ ಅವರ ಬೆಂಬಲಕ್ಕೆ ಕಾಂಗ್ರೆಸ್‌ ಪಕ್ಷ ಪೂರ್ಣವಾಗಿ ನಿಲ್ಲಲಿದೆ ಎಂದು ಹೇಳಿದರು.

ದೆಹಲಿಯಲ್ಲಿ ಸಿಕ್ಕ ಹಣ ನನ್ನದೇ, ಆದ್ರೆ ತಪ್ಪು ಮಾಡಿಲ್ಲ

ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವದಲ್ಲಿರುವಾಗಲೇ ಡಿ.ಕೆ.ಶಿವಕುಮಾರ್‌, ಎಂ.ಟಿ.ಬಿ. ನಾಗರಾಜ್‌, ರಮೇಶ್‌ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ಕೆ.ಗೋವಿಂದರಾಜ್‌ ಮನೆ ಮೇಲೆ ಐಟಿ, ಇಡಿ, ಸಿಬಿಐ ದಾಳಿ ಮಾಡಿಸಲಾಗಿತ್ತು. ಈ ಮೂಲಕ ನಮ್ಮ ನಾಯಕರ ಚಾರಿತ್ರ್ಯವಧೆ ಮಾಡಲಾಗಿತ್ತು. ಬಿಜೆಪಿಯೇತರ ನಾಯಕರ ಮನೆ ಮೇಲೆ ಮಾತ್ರವೇ ಈ ದಾಳಿಗಳನ್ನು ಏಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಆಪರೇಷನ್‌ ಕಮಲ ವಿಚಾರವಾಗಿ ಯಡಿಯೂರಪ್ಪ ಅವರು ಆಡಿಯೋ ಟೇಪ್‌ನಲ್ಲಿ ಇರುವ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡ ಮೇಲೂ ಆ ಪ್ರಕರಣದ ತನಿಖೆ ಯಾಕೆ ಆಗಲಿಲ್ಲ. ಶ್ರೀನಿವಾಸ್‌ ಗೌಡ ಸದನದಲ್ಲಿಯೇ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಆಶ್ವತ್‌ನಾರಾಯಣ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳ ವಿರುದ್ಧ 5 ಕೋಟಿ ರು. ಲಂಚದ ಆರೋಪ ಮಾಡಿದ್ದರು. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆಶಿಗೆ ED ಕುಣಿಕೆ: ಎಲಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ