ಬೆಂಗಳೂರು [ಸೆ.11]:  ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಬಂಧನ ಖಂಡಿಸಿ ಬುಧವಾರ ಬೃಹತ್‌ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿರುವ ರಾಜ್ಯ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟವು ಕೇಂದ್ರ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.

ಒಕ್ಕಲಿಗರ ಸಮುದಾಯದ ಪ್ರಭಾವಿ ನಾಯಕ, ಕಾಂಗ್ರೆಸ್‌ನ ಪ್ರಮುಖ ಮುಖಂಡ ಡಿ.ಕೆ.ಶಿವಕುಮಾರ್‌ ಪರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ವಿಶ್ವ ಒಕ್ಕಲಿಗರ ಮಹಾ ವೇದಿಕೆ, ರಾಜ್ಯ ಒಕ್ಕಲಿಗ ಕೆಂಪೇಗೌಡ ಸಂಘ ಸೇರಿದಂತೆ ಹತ್ತಕ್ಕೂ ಹೆಚ್ಚು ವಿವಿಧ ಒಕ್ಕಲಿಗರ ಸಂಘಟನೆಗಳ ಜತೆಗೆ ಕಾಂಗ್ರೆಸ್‌ ಪಕ್ಷ ಕೂಡ ಬೆಂಬಲ ಘೋಷಿಸಿದ್ದು, ಒಟ್ಟಾಗಿ ಬುಧವಾರ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿವೆ. ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್‌ ಜಾಥಾ ನಡೆಸಲು ಉದ್ದೇಶಿಸಲಾಗಿದ್ದು, ಸುಮಾರು 30ರಿಂದ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯನ್ನು ಪ್ರತಿಭಟನಾಕಾರರು ಹೊಂದಿದ್ದಾರೆ. ಇದರ ಪರಿಣಾಮ ಬೆಂಗಳೂರು ಸಂಚಾರ ವ್ಯವಸ್ಥೆ ಹದಗೆಡುವ ಎಲ್ಲಾ ಸಾಧ್ಯತೆಗಳಿವೆ.

‘ಡಿಕೆಶಿ ಬಂಧನಕ್ಕೆ ಜಾತಿ ಬಣ್ಣ ನಾಚಿಕೆಗೇಡು’

ಪ್ರತಿಭಟನೆಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕಾಂಗ್ರೆಸ್‌ ನಾಯಕ ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ವೈ.ಡಿ.ರವಿ ಶಂಕರ್‌, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಭಾರತಿ ಶಂಕರ್‌, ರಾಧಾ ವೆಂಕಟೇಶ್‌, ಜಗದೀಶ್‌ ಗೌಡ, ಕೃಷ್ಣ ಮೂರ್ತಿ, ಕುಮಾರ್‌, ನಿಖಿಲ್‌ ಗೌಡ, ನಾಗರಾಜ್‌ ಹಾಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಅಲ್ಲದೆ, ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಮಠದ ನಂಜಾವಧೂತ ಸ್ವಾಮೀಜಿ ಸೇರಿದಂತೆ ವಿವಿಧ ಒಕ್ಕಲಿಗ ಮಠಾಧೀಶರಿಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಕರವೇ ಪದಾಧಿಕಾರಿ ಭಾರತಿ ಶಂಕರ್‌ ತಿಳಿಸಿದ್ದಾರೆ.

ಪ್ರಮುಖವಾಗಿ ಮೂರು ವಿಚಾರಗಳನ್ನಿಟ್ಟುಕೊಂಡು ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿದೆ. ಐಟಿ, ಇಡಿ, ಸಿಬಿಐ ಮೂಲಕ ಕೇಂದ್ರ ಸರ್ಕಾರ ಒಕ್ಕಲಿಗ ಮುಖಂಡರನ್ನು ದಮನ ಮಾಡಲು ಮುಂದಾಗಿದೆ. ಉದ್ಯಮಿ ಸಿದ್ಧಾಥ್‌ರ್‍ ಆತ್ಮಹತ್ಯೆ ಹಿಂದೆ ಕೇಂದ್ರ ಸರ್ಕಾರದ ತನಿಖೆ ಹೆಸರಿನ ಕುಮ್ಮಕ್ಕು ಅಡಗಿದೆ. ಈಗ ಐಟಿ, ಇಡಿ ತನಿಖಾ ಸಂಸ್ಥೆಗಳ ಮೂಲಕ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಿ ರಾಜಕೀಯ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಂಧನಕ್ಕೂ ಸಂಚು ರೂಪಿಸುತ್ತಿದೆ. ಇದು ಒಕ್ಕಲಿಗ ವಿರೋಧಿ ನೀತಿಯಾಗಿದ್ದು, ನಮ್ಮ ಸಮುದಾಯ ಇದನ್ನು ಸಹಿಸುವುದಿಲ್ಲ ಎಂದಿರುವ ಒಕ್ಕೂಟಗಳು ಕೂಡಲೇ ಡಿ.ಕೆ.ಶಿವಕುಮಾರ್‌ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿವೆ.

ಬೆಂಗಳೂರಲ್ಲಿ ಬಿಗಿ ಬಂದೋಬಸ್ತ್ : 

ಹೋರಾಟದಲ್ಲಿ ಮಠಾಧೀಶರು, ವಿವಿಧ ಪಕ್ಷಗಳ ರಾಜಕೀಯ ನಾಯಕರು ಹಾಗೂ ಸಮುದಾಯದ ಜನರು ಪಾಲ್ಗೊಂಡರೆ ಪ್ರತಿಭಟನೆ ಬೃಹತ್‌ ಒಕ್ಕಲಿಗರ ಶಕ್ತಿ ಪ್ರದರ್ಶನವಾಗಿ ಮಾರ್ಪಡಲಿದ್ದು, ಪ್ರತಿಭಟನೆಯ ಸ್ವರೂಪ ತೀವ್ರಗೊಳ್ಳುವ ಸಾಧ್ಯತೆ ಇದೆ. ಜಾಥಾ ನಡೆಯುವ ಮಾರ್ಗ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಪೊಲೀಸ್‌ ಇಲಾಖೆ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಷರತ್ತುಗಳನ್ನು ವಿಧಿಸಿ ಪ್ರತಿಭಟನೆಗೆ ಅವಕಾಶ ನೀಡಿರುವ ಪೊಲೀಸರು ಬಿಗಿ ಬಂದೋಬಸ್‌್ತ ಮಾಡಿಕೊಂಡಿದ್ದಾರೆ.

ಬೆಳಗ್ಗೆ 10ಕ್ಕೆ ಮೆರವಣಿಗೆ ಆರಂಭ:

ಬೆಳಗ್ಗೆ 10 ಗಂಟೆಗೆ ಬಸನವಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳುವ ಪಕ್ಷದ ಹಾಗೂ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಅಲ್ಲಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ರಾಜಭವನಕ್ಕೆ ತೆರಳಿ ಒಕ್ಕೂಟದ ಪ್ರತಿನಿಧಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ.

ಡಿಕೆಶಿ ಪರ ಪ್ರತಿಭಟನೆ : ಬೆಂಗಳೂರಿನ ಹಲವು ಸಂಚಾರ ಮಾರ್ಗದಲ್ಲಿ ಬದಲಾವಣೆ

ಮೆರವಣಿಗೆ ನ್ಯಾಷನಲ್‌ ಕಾಲೇಜು ಮೈದಾನದಿಂದ ಪುರಭವನ, ಕಾರ್ಪೊರೇಷನ್‌, ಮೈಸೂರು ಬ್ಯಾಂಕ್‌ ವೃತ್ತದ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ಮೆರವಣಿಗೆಯಲ್ಲಿ ಕನಿಷ್ಠ 40 ಸಾವಿರ ಮಂದಿಯನ್ನು ಸೇರಿಸುವ ಗುರಿಯನ್ನು ಒಕ್ಕೂಟ ಇಟ್ಟುಕೊಂಡಿದೆ.

ರಾಮಲಿಂಗಾರೆಡ್ಡಿ ಸಭೆ:  ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್‌ ನಾಯಕ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಕೂಡ ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಬೆಂಗಳೂರು ನಗರ ಘಟಕದ ಮುಖಂಡರು, ಬಿಬಿಎಂಪಿ ಸದಸ್ಯರು, ಕಾರ್ಯಕರ್ತರ, ಬೆಂಬಲಿಗರ ಸಭೆ ನಡೆಸಿ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದಾರೆ.

ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಪದ್ಮಾವತಿ, ರಾಮಚಂದ್ರಪ್ಪ, ಸಂಪತ್‌ ಕುಮಾರ್‌, ಮಂಜುನಾಥ ರೆಡ್ಡಿ, ಮಾಜಿ ಶಾಸಕ ಲಕ್ಷ್ಮೇನಾರಾಯಣ್‌, ಬಿಬಿಎಂಪಿಯ ವಿವಿಧ ಕಾಂಗ್ರೆಸ್‌ ಕಾರ್ಪೊರೇಟರ್‌ಗಳು, ಬೆಂಗಳೂರು ನಗರ ಕಾಂಗ್ರೆಸ್‌ನ ವಿವಿಧ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು. ಇಡೀ ಬೆಂಗಳೂರಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.