‘ಡಿಕೆಶಿ ಬಂಧನಕ್ಕೆ ಜಾತಿ ಬಣ್ಣ ನಾಚಿಕೆಗೇಡು’
ಡಿಕೆ.ಶಿವಕುಮಾರ್ ಬಂಧನದ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು/ ಮೈಸೂರು [ಸೆ.11]: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹರಿಹಾಯ್ದಿದ್ದಾರೆ.
ಇದೇ ವೇಳೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು, ಒಕ್ಕಲಿಗ ಸಮುದಾಯದ ಮುಖಂಡರು ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ವಾಸ್ತವವಾಗಿ ಯೋಚಿಸಿ ಸತ್ಯ ಅರಿಯಬೇಕಿದೆ ಎಂದು ಹೇಳಿದ್ದಾರೆ.
ಬುಧವಾರದ ಪ್ರತಿಭಟನೆಗೆ ಮಂಗಳವಾರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅಶೋಕ್, ಅಕ್ರಮ ಹಣ ವಹಿವಾಟುಗಳು ಹಾಗೂ ಸಾಗಾಣಿಕೆಯ ವಿಚಾರವಾಗಿ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗಾಗಿ ಬಂಧಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ತನಿಖಾ ಸಂಸ್ಥೆಗಳು ಸಂವಿಧಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಕಾನೂನಿಗಿಂತ ಮಿಗಿಲು ಯಾರೂ ಇಲ್ಲ: ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಒಕ್ಕಲಿಗ ಸಮುದಾಯದ ಮುಖಂಡರು ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ವಾಸ್ತವವಾಗಿ ಯೋಚಿಸಿ ಸತ್ಯ ಅರಿಯಬೇಕಿದೆ. ನಾನು ಕೂಡಾ ಒಕ್ಕಲಿಗ ಸಮುದಾಯದವನು. ಇಲ್ಲಿ ಕಾನೂನಿಗಿಂತ ಯಾರೂ ಮಿಗಿಲಲ್ಲ. ಹಾಗೆ ಭಾವಿಸಿದರೆ ಅದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಅಭಿಪ್ರಾಯಪಟ್ಟರು.
ನನ್ನ ಮನೆಯಲ್ಲಿ .10 ಕೋಟಿ ಹಣವಿದ್ದರೆ ನಾನು ಪ್ರಾಮಾಣಿಕ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾರಣ ಕೇಳಿದರೆ ಉತ್ತರಿಸಬೇಕು. ಆ ಬಗ್ಗೆ ತನಿಖೆ ಬೇಡವೆಂದರೆ ಕಾನೂನಿಗೆ ಅಪಚಾರ ಎಸಗಿದಂತೆ. ಹೀಗಾಗಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿಚಾರವನ್ನು ಒಂದು ಸಮುದಾಯದ ವಿರೋಧಿ ಎಂದು ಭಾವಿಸಬಾರದು. ವಾಸ್ತವಿಕ ನೆಲೆಯಲ್ಲಿ ಯೋಚಿಸಬೇಕು ಎಂದರು.
ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್‌ನವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಆದರೆ, ಸಂವಿಧಾನದ ಅಡಿಯಲ್ಲಿರುವ ಸಂಸ್ಥೆಗಳು ಇವರ ಮೇಲೆ ತನಿಖೆ ನಡೆಸಬಾರದೆಂದರೆ ಹೇಗೆ? ಸಂವಿಧಾನ ವಿರೋಧಿಯಾಗಿ ನಡೆಯಲು ದೇಶದಲ್ಲಿ ಅವಕಾಶವಿಲ್ಲ ಎಂದರು.
ಅಕ್ರಮ ಆರೋಪಗಳ ಬಂದಾಗ ಸುಮ್ಮನಿದ್ದರೆ ಹೊಂದಾಣಿಕೆ ರಾಜಕೀಯ ಎನ್ನುತ್ತೀರಿ. ತನಿಖೆ ನಡೆಸಿದರೆ ದ್ವೇಷದ ರಾಜಕಾರಣ ಅಂತೀರಿ. ನಾವೇನು ಮಾಡಬೇಕು? ತನಿಖೆ ನಡೆಸುವುದೇ ಇಲಿ ಹಿಡಿಯುವುದು ಎಂದರೆ, ಹಲವು ಜವಾಬ್ದಾರಿ ನಿರ್ವಹಿಸಿದ್ದ ಸಿದ್ದರಾಮಯ್ಯ ಅವರು ವಾಚ್ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದರು. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ ತನಿಖೆಗೆ ಆದೇಶಿಸಿದ್ದರು. ಅದರ ಅವಶ್ಯಕತೆ ಏನಿತ್ತು ಎಂದು ರವಿ ಪ್ರಶ್ನಿಸಿದರು.