ಬೆಂಗಳೂರು(ನ.24): ತೀವ್ರ ಕೂತೂಹಲ ಕೆರಳಿಸಿದ್ದ ಐಎಎಸ್​ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣಕ್ಕೆ ತೆರೆ ಬಿದ್ದಿದೆ. 20 ತಿಂಗಳು ಸುದೀರ್ಘ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ಆ ವರದಿಯಲ್ಲಿನ ಕೆಲ ಅಂಶಗಳು ಸುವರ್ಣನ್ಯೂಸ್​ಗೆ ಲಭ್ಯವಾಗಿದೆ.

ರಾಜ್ಯದ್ಯಾಂತ ತೀವ್ರ ಕೂತೂಹಲ ಕೆರಳಿಸಿದ್ದ ಐಎಎಸ್​ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆ ಪೂರ್ಣಗೊಂಡಿದೆ. ಮಾರ್ಚ್​ 16, 2015 ರಂದು ಮಡಿವಾಳದ ಅಪಾರ್ಟ್​ಮೆಂಟ್​ನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್​ ಅಧಿಕಾರಿ ಡಿಕೆ ರವಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾಕಷ್ಟು ಹೋರಾಟದ ಬಳಿಕ ಸರ್ಕಾರ ಸಿಬಿಐ ಹೆಗಲಿಗೆ ತನಿಖೆಯ ಹೊಣೆ ಹೊರಿಸಿತ್ತು. ಸುಮಾರು 20 ತಿಂಗಳ ತನಿಖೆ ಬಳಿಕ ನಾಳೆ ಸಿಬಿಐ ಸರ್ಕಾರಕ್ಕೆ ವರದಿ ಕೊಡಲಿದೆ.

- 90 ಪುಟಗಳ ಸಿಬಿಐ ವರದಿ ರೆಡಿ

- 100 ಮಂದಿಯ ತೀವ್ರ ವಿಚಾರಣೆ

- ಆತ್ಮಹತ್ಯೆಯಿಂದಲೇ ಡಿಕೆ ರವಿ ಸಾವು

- ವೈಯುಕ್ತಿಕ ಕಾರಣವೇ ಸಾವಿಗೆ ಕಾರಣ

- ರವಿ ಸಾವಿನಲ್ಲಿ ಬೇರೆಯವರ ಕೈವಾಡವಿಲ್ಲ

ಸಿಬಿಐ ಸುಮಾರು 100 ಕ್ಕೂ ಹೆಚ್ಚು ಮಂದೀನ ವಿಚಾರಣೆಗೊಳಿಸಿತ್ತು. ಅಂತಿಮವಾಗಿ ತನ್ನ ವರದಿಯನ್ನ ಸಿದ್ದಪಡಿಸಿದ. 90 ಪುಟಗಳ ವರದಿಯನ್ನ ದಕ್ಷಿಣ ವಿಭಾಗದ ಎಸಿ, ಡಿಬಿ ನಟೇಶ್​ ಅವರಿಗೆ ಸಲ್ಲಿಸಲಿದೆ. ಇದರಲ್ಲಿ  ಆತ್ಮಹತ್ಯೆಯಿಂದಲೇ ಡಿಕೆ ರವಿ ಸಾವು ಸಂಭವಿಸಿದ್ದು ವೈಯುಕ್ತಿಕ ಕಾರಣವೇ ರವಿ ಸಾವಿಗೆ ಕಾರಣ ಅಂತ ಹೇಳಲಾಗಿದೆ. ಅಲ್ಲದೆ ಡಿಕೆ ರವಿ ಸಾವಿನಲ್ಲಿ ಬೇರೆಯವರ ಕೈವಾಡವಿಲ್ಲ ಅನ್ನೋದನ್ನೂ ಸಿಬಿಐ ಉಲ್ಲೇಖಿಸಿದೆ ಅಂತ ಹೇಳಲಾಗ್ತಿದೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಿಆರ್​ಪಿಸಿ 174 ರ ಅಡಿ ದೂರು ದಾಖಲಿಸಿಕೊಂಡಿದ್ದ, ಪೊಲೀಸರು ತನಿಖೆ ನಡೆಸಿದ್ದರು. ಆರಂಭದಲ್ಲಿಯೇ ಇದೊಂದು ಆತ್ಮಹತ್ಯೆ ಅನ್ನೋ ಹೇಳಿಕೆಗಳು ಸರ್ಕಾರದಿಂದ ಪ್ರಸ್ತಾಪವಾದಾಗ ವಿಪಕ್ಷಗಳು ಸದನದಲ್ಲಿ ಸಿಬಿಐಗೆ ವಹಿಸಲು ಒತ್ತಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಡಿಕೆ ರವಿ ಪ್ರಕರಣವನ್ನ ಮಾರ್ಚ್​ 23 ರಂದು ಸಿಬಿಐಗೆ ವಹಿಸಿತ್ತು.

ವರದಿ: ರವಿಕುಮಾರ್ ಮತ್ತು ಮುತ್ತಪ್ಪ ಲಮಾಣಿ, ಸುವರ್ಣ ನ್ಯೂಸ್​