ಲಖನೌ[ಅ.07]: ಪೊಲೀಸ್‌ ಅಧಿಕಾರಿಗಳ ಕಾರ್ಯ ಕ್ಷಮತೆ ಹಾಗೂ ದಕ್ಷತೆ ಹೆಚ್ಚಳ ಮಾಡಲು ಹಿರಿಯ ಪೊಲೀಸ್‌ ಅಧಿಕಾರಿಗಳು ವಿವಿಧ ಕ್ರಮಗಳನ್ನು ಕೈಗೊಳ್ಳುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಎಲ್ಲಾ ಪೊಲೀಸರಿಗೆ ಇಂಗ್ಲೀಷ್‌ ಕಲಿಕೆ ಹಾಗೂ ಸ್ಮಾರ್ಟ್‌ ಫೋನ್‌ ಬಳಕೆಯನ್ನು ಕಡ್ಡಾಯಗೊಳಿಸಿ ಎಸ್ಪಿ ದೇವರಂಜನ್‌ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಪೊಲೀಸರನ್ನು ತಂತ್ರಜ್ಞಾನ ಹಾಗೂ ಆಧುನಿಕತೆಗೆ ಒಗ್ಗಿಕೊಳ್ಳುವಂತೆ ಮಾಡಲು ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಈಗಾಗಲೇ ಕಾರ್ಯಗಾರಗಳನ್ನು ನಡೆಸಲಾಗಿದ್ದು, ಇಂಗ್ಲೀಷ್‌ ಕಲಿಯಲು ಪ್ರತಿಯೊಬ್ಬರು ಡೈರಿ ಇಟ್ಟುಕೊಳ್ಳಬೇಕು ಮತ್ತು ಇಂಗ್ಲೀಷ್‌ ದಿನ ಪತ್ರಿಕೆ ಹಾಗೂ ಡಿಕ್ಷನರಿಗಳನ್ನು ಖರೀದಿ ಮಾಡಬೇಕು ಆದೇಶಿಸಲಾಗಿದೆ. ಎಸ್ಪಿಯವರ ಹೊಸ ಅದೇಶದಿಂದಾಗಿ ಪೊಲೀಸರು ಶಬ್ದಕೋಶ ಹಾಗೂ ಇಂಗ್ಲೀಷ್‌ ಲರ್ನಿಂಗ್‌ ಖರೀದಿಗೆ ಮುಗಿ ಬಿದ್ದಿದ್ದಾರೆ.

ಅಲ್ಲದೆ ರಜಾ ಅರ್ಜಿಗಳನ್ನೂ ಇಂಗ್ಲೀಷಿನಲ್ಲೇ ಬರೆಯಬೇಕೆಂದು ಸೂಚನೆ ನೀಡಲಾಗಿದ್ದು, ಪೊಲೀಸರು ಗೂಗಲ್‌ ಮೊರೆ ಹೋಗಿದ್ದಾರೆ. ಜತೆಗೆ ಠಾಣೆಗಳಲ್ಲಿ ಇಂಗ್ಲೀಷ್‌ ದಿನ ಪತ್ರಿಕೆ ಹಾಕುವಂತೆ ಸೂಚನೆ ನೀಡಲಾಗಿದೆ. ಇಂಗ್ಲೀಷ್‌ನಲ್ಲಿರುವ ಕೋರ್ಟ್‌ ಆದೇಶಗಳನ್ನು ಅರ್ಥೈಸುವಲ್ಲಿ ಪೊಲೀಸ್‌ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದು, ಇದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ವರ್ಮಾ ಹೇಳಿದ್ದಾರೆ.

ಅಲ್ಲದೇ ಎಲ್ಲಾ ಪೊಲೀಸರಿಗೆ ಸ್ಮಾರ್ಟ್‌ ಬಳಸಲು ಸೂಚನೆ ನೀಡಲಾಗಿದ್ದು, ಅದರಲ್ಲಿ ವಾಟ್ಸಪ್‌, ಕ್ಯಾಮ್‌ ಸ್ಕಾ್ಯನರ್‌ ಹಾಗೂ ಗೂಗಲ್‌ ಡ್ರೈವ್‌ ಹಾಗೂ ಗೂಗಲ್‌ ಇಂಡಿಕ್‌ ಕೀ ಬೋರ್ಡ್‌ ಇರಿಸಲು ಕಡ್ಡಾಯ ಮಾಡಲಾಗಿದೆ. ಅಲ್ಲದೇ ಎಲ್ಲಾ ಕಡತಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಅಲ್ಲದೇ ಈ ಆದೇಶ ಪಾಲಿಸದವರನ್ನು ಅಮಾನತು ಮಾಡುವುದಾಗಿಯೂ ಎಚ್ಚರಿಸಲಾಗಿದೆ.

ಆಧುನಿಕ ಯುಗದಲ್ಲಿ ವಾಟ್ಸಪ್‌ ಬಳಕೆ, ಫೋಟೋ ಕಳುಹಿಸುವುದು ಮುಂತಾದವುಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದರಿಂದ ಮಾಹಿತಿ ವಿನಿಮಯಕ್ಕೂ ವೇಗ ಸಿಗಲಿದೆ. ಹಾಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎನ್ನುವುದು ವರ್ಮಾ ಅಭಿಪ್ರಾಯ.

ಜತೆಗೆ ವಿಐಪಿಗೆ ಭದ್ರತೆ ನೀಡುವ ಪೊಲೀಸರಿಗೆ ಏಕ ರೂಪದ ಬ್ರಾಂಡೆಡ್‌ ಸೂಟ್‌, ಸನ್‌ ಗ್ಲಾಸ್‌ ಹಾಗೂ ಶೂಗಳನ್ನು ಖರೀದಿ ಮಾಡುವಂತೆ ಆದೇಶ ಮಾಡಲಾಗಿದೆ. ಈಗಾಗಲೇ 50 ರಷ್ಟುಸಬ್‌ ಇನ್ಸ್‌ಪೆಕ್ಟರ್‌ಗಳು ಸೂಟ್‌ಗೆ ಆರ್ಡರ್‌ ನೀಡಿದ್ದು, ವಿಐಪಿ ಭದ್ರತೆಗೆ ವಿಶೇಷ ತರಬೇತಿ ಕೂಡ ನೀಡಲಾಗಿದೆ. ಭದ್ರತೆ ವೇಳೆ ಪೊಲೀಸರು ಕೂಡ ಉತ್ತಮವಾಗಿ ಕಾಣಬೇಕೆಂದು ಈ ಆದೇಶ ಹೊರಡಿಸಿರುವುದಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಜತೆಗೆ ತಮ್ಮ ಜಿಲ್ಲೆಗೆ ನೂರು ಹೆಚ್ಚುವರಿ ಮಹಿಳಾ ಪೇದೆಗಳನ್ನು ನೀಡಬೇಕೆಂದು ಮನವಿ ಸಲ್ಲಿಸಲಾಗಿದ್ದು, ಹಾಲಿ ಇರುವ ಮಹಿಳಾ ಪೊಲೀಸರಿಗೆ ಬುಲೆಟ್‌ ಪ್ರೂಫ್‌ ಜಾಕೆಟ್‌ ಹಾಗೂ ರೈಫಲ್‌ಗಳನ್ನು ನೀಡಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಅಲ್ಲದೇ ಮಹಿಳಾ ಪೇದೆಗಳಿಗೆ ಬೈಕ್‌ ಚಲಾಯಿಸಲು ಕಲಿಯಬೇಕು ಮತ್ತು ಸೆಂಟ್ರಿ ಕೆಲಸದವರಿಗೆ ಪ್ರತಿ ದಿನ ಕನಿಷ್ಠ 3 ಗಂಟೆ 12 ಕೆಜಿ ಭಾರ ಹೊರಬೇಕು ಎಂದು ಆದೇಶ ಮಾಡಲಾಗಿದೆ.