ನವದೆಹಲಿ[ಜು.21]: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರ ಉತ್ತರಾಧಿಕಾರಿ ಶೋಧಕ್ಕೆ ಪಕ್ಷದೊಳಗೆ ನಡೆಯುತ್ತಿರುವ ಅನೌಪಚಾರಿಕ ಪ್ರಕ್ರಿಯೆಯ ಔಚಿತ್ಯದ ಬಗ್ಗೆಯೇ ಅಸಮಾಧಾನ ಹೊರಹಾಕಲು ಹಲವು ಕಾಂಗ್ರೆಸ್‌ ನಾಯಕರು ಸಜ್ಜಾಗಿದ್ದಾರೆ. ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟು ಶಮನವಾಗುತ್ತಿದ್ದಂತೆ, ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಅತೃಪ್ತಿ ಭುಗಿಲೇಳುವ ಸಾಧ್ಯತೆಗಳು ಇವೆ ಎಂದು ಮೂಲಗಳನ್ನು ಉಲ್ಲೇಖಿಸಿ ದೈನಿಕವೊಂದು ವರದಿ ಮಾಡಿದೆ.

ರಾಹುಲ್‌ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಲು ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಪ್ರಯತ್ನಿಸುತ್ತಿದೆ. ಆದರೆ ಕೆಲ ನಾಯಕರು ಈ ಸಮಿತಿಯನ್ನೇ ವಿಸರ್ಜಿಸಿ, ಮೊದಲು ಅದಕ್ಕೆ ಚುನಾವಣೆ ನಡೆಸಬೇಕು. ಹೊಸ ಸಮಿತಿ ಮೂಲಕ ಉತ್ತರಾಧಿಕಾರಿ ಆಯ್ಕೆ ನಡೆಯಬೇಕು ಎಂಬ ವಾದ ಮುಂದಿಟ್ಟಿದ್ದಾರೆ.

ಪಕ್ಷಾಧ್ಯಕ್ಷರು ರಾಜೀನಾಮೆ ನೀಡಿದ ಸಂದರ್ಭ ಸಿಡಬ್ಲ್ಯುಸಿಯನ್ನು ವಜಾಗೊಳಿಸಬೇಕು. ಚುನಾವಣೆ ನಡೆಸಬೇಕು. ಅಂತಹ ಸಂದರ್ಭದಲ್ಲಿ ನಾವೂ ಆಯ್ಕೆಯಾಗಬಹುದು. ನಾಮನಿರ್ದೇಶಿತ ಸದಸ್ಯರೇಕೆ ಮುಂದಿನ ಕಾಂಗ್ರೆಸ್‌ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಪಕ್ಷದ ಲೋಕಸಭಾ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.

ಕರ್ನಾಟಕ ಬಿಕ್ಕಟ್ಟು ಬಗೆಹರಿಯುತ್ತಿದ್ದಂತೆ ಈ ಕುರಿತು ಬಂಡಾಯದ ಬಾವುಟ ಹಾರುವ ಎಲ್ಲ ಸಾಧ್ಯತೆಗಳೂ ಇವೆ. ಲೋಕಸಭಾ ಸದಸ್ಯರು ಹಾಗೂ ಹಿರಿಯ ನಾಯಕರು ಇದಕ್ಕಾಗಿ ಒಂದು ಗುಂಪು ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಕಡೆಯ ಬಾರಿಗೆ ಚುನಾವಣೆ ನಡೆದಿದ್ದು 2000ನೇ ಇಸ್ವಿಯಲ್ಲಿ. ಆಗ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಜಿತೇಂದ್ರ ಪ್ರಸಾದ ಪರಾಭವಗೊಂಡಿದ್ದರು. ಈ ಬಾರಿಯೂ ಚುನಾವಣೆ ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ. ಚುನಾವಣೆ ನಡೆಸಬೇಕಾದ ಸಿಡಬ್ಲ್ಯುಸಿಯಲ್ಲಿ ಕೇವಲ ಇಬ್ಬರು ಮಾತ್ರವೇ ಲೋಕಸಭಾ ಸದಸ್ಯರು ಇದ್ದಾರೆ.