ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಉಂಟಾಗುವುದೆಲ್ಲ ಸಹಜ. ಹಾಗಂತ ಯಾರೂ ಪಕ್ಷ ಬಿಟ್ಟು ಹೋಗಲ್ಲ, ಎಲ್ಲರನ್ನೂ ಸಮಾಧಾನಪಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿ : ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಉಂಟಾಗುವುದೆಲ್ಲ ಸಹಜ. ಹಾಗಂತ ಯಾರೂ ಪಕ್ಷ ಬಿಟ್ಟು ಹೋಗಲ್ಲ, ಎಲ್ಲರನ್ನೂ ಸಮಾಧಾನಪಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ.

ತಾಲೂಕಿನ ಹಿರೆಮುಚ್ಚಳಗುಡ್ಡ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರದ ಆಸೆ ಇದ್ದವರಿಗೆ ಸಚಿವ ಸ್ಥಾನ ಸಿಗದಿದ್ದಾಗ ಅಸಮಾಧಾನ ಆಗುತ್ತದೆ. ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಯಾರೂ ಪಕ್ಷ ಬಿಟ್ಟು ಹೋಗಲ್ಲ. ಎಲ್ಲರೂ ಪಕ್ಷದಲ್ಲೇ ಇರುತ್ತಾರೆ. ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಬಿ. ಪಾಟೀಲರನ್ನು ಸಮಾಧಾನ ಮಾಡಿದ್ದೇನೆ. ಅದು ಯಾವ ರೀತಿ ಅಂತ ಹೇಳಲು ಆಗಲ್ಲ. ಅದು ನನಗೆ ಮತ್ತು ಅವರ ನಡುವಿನ ವಿಚಾರ ಎಂದು ತಿಳಿಸಿದರು.

ಕೈ ಸುಟ್ಟುಕೊಂಡಿದ್ದಾರೆ ಬಿಜೆಪಿಯವರು:

ಆಪರೇಷನ್‌ ಕಮಲ ಮಾಡಲು ಹೋಗಿ ಬಿಜೆಪಿಯವರು ಈಗಾಗಲೇ ತಮ್ಮ ಕೈಯನ್ನು ತಾವೇ ಸುಟ್ಟುಕೊಂಡಿದ್ದಾರೆ. ಮತ್ತೆ ಈ ರೀತಿ ಏನಾದರೂ ಮಾಡಲು ಬಂದರೆ ಅದು ಸಾಧ್ಯವಾಗದು. ಮೊದಲು ಬಿಜೆಪಿಯವರು ತಮ್ಮೊಳಗಿನ ಅಸಮಾಧಾನ ಬಗೆಹರಿಸಿಕೊಳ್ಳಲಿ ಎಂದು ಕಿಡಿಕಾರಿದರು ಸಿದ್ದರಾಮಯ್ಯ.

ಭಾಷಣಕ್ಕೆ ಹಾಕಿದ್ದ ಶಾಮಿಯಾನ ನೆಲಕಚ್ಚಿತು:

ಬಾದಾಮಿ ತಾಲೂಕಿನ ಕೆಂದೂರ ಕೆರೆ ವೀಕ್ಷಣೆಗೆ ಸಿದ್ದರಾಮಯ್ಯ ಹೋದಾಗ ಜೋರು ಮಳೆ ಸುರಿಯಿತು. ಹೀಗಾಗಿ ಅವರ ಕಾರ್ಯಕ್ರಮಕ್ಕೆಂದು ಹಾಕಿದ್ದ ಶಾಮಿಯಾನ ನೆಲಕ್ಕಚ್ಚಿತು. ಹೀಗಾಗಿ ಸಿದ್ದರಾಮಯ್ಯ ಕಾರಿನಲ್ಲೇ ಕುಳಿತು ಜನರ ಮನವಿ ಸ್ವೀಕರಿಸಿದರು. 

ಶಾಸಕರ ಸಭೆ ವಿಚಾರ ಗೊತ್ತಿಲ್ಲ : ಮಾಜಿ ಸಚಿವ ಎಂ.ಬಿ. ಪಾಟೀಲ ಅವರ ಬೆಂಗಳೂರಿನ ಮನೆಯಲ್ಲಿ ಕೆಲ ಶಾಸಕರು ಸಭೆ ನಡೆಸಿದ ವಿಚಾರ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ನನ್ನನ್ನು ಏನೂ ಕೇಳಬೇಡಿ. ಗುರುವಾರದಿಂದ ನಾನು ಬಾದಾಮಿಯಲ್ಲೇ ಇದ್ದೇನೆ. ಅಲ್ಲದೆ ಅಸಮಾಧಾನದ ವಿಚಾರವಾಗಿ ಗುರುವಾರವೇ ಮಾತನಾಡಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರು, ಸಚಿವರಾದ ಕೆ.ಜೆ.ಜಾಜ್‌ರ್‍, ಡಿ.ಕೆ.ಶಿವಕುಮಾರ್‌ ಕೂಡ ಅವರನ್ನು ಭೇಟಿ ಮಾಡಿ ಸಮಾಧಾನ ಮಾಡಿದ್ದಾರೆ. ಹೀಗಾಗಿ ಈ ವಿಚಾರವಾಗಿ ಮತ್ತೆ ನಾನು ಬೆಂಗಳೂರಿಗೆ ಹೋಗೋದ್ಯಾಕೆ ಎಂದು ಪ್ರಶ್ನಿಸಿದ ಅವರು, ನನ್ನ ಬಾದಾಮಿ ಮತಕ್ಷೇತ್ರದ ಪ್ರವಾಸ ಮುಂದುವರಿಸುತ್ತೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಜನ ಕೆಲವರ ಷಡ್ಯಂತ್ರಕ್ಕೆ ಬಲಿಯಾದರು. ಆದರೆ ಬಾದಾಮಿ ಜನತೆ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ನನ್ನ ಗೆಲುವಿಗೆ ಕಾರಣರಾಗಿದ್ದಾರೆ. ಇಲ್ಲೂ ಕೆಲ ಘಟಾನುಘಟಿಗಳು ನನ್ನನ್ನು ಸೋಲಿಸಲು ಮುಂದಾದರೂ ಜನ ಕೈಬಿಡಲಿಲ್ಲ. ನಾನು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆ ಈಡೇರಿಸುತ್ತೇನೆ.

- ಸಿದ್ದರಾಮಯ್ಯ, ಮಾಜಿ ಸಿಎಂ