ಬೆಂಗಳೂರು [ಜು.30]: ಬರೋಬ್ಬರಿ ಇಪ್ಪತ್ತು ಮೂರು ದಿನಗಳ ಅಜ್ಞಾತವಾಸದಿಂದ ಹೊರ ಬಂದ ಅತೃಪ್ತ ಕಾಂಗ್ರೆಸ್‌ ಶಾಸಕರು, ತಮ್ಮ ಶಾಸಕತ್ವವನ್ನು ಅನರ್ಹಗೊಳಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಕಾಂಗ್ರೆಸ್‌ನ ಪ್ರಮುಖ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
ಜತೆಗೆ, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಯಾರು ಕಾರಣ, ಇದರ ಹಿಂದಿನ ಘಟನೆಗಳು ಏನು ಎಂಬ ಬಗ್ಗೆ ಸ್ಫೋಟಕ ಮಾಹಿತಿಯನ್ನು ಇನ್ನು ಮೂರು ದಿನಗಳೊಳಗೆ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುವ ಘೋಷಣೆಯನ್ನು ಮಾಡಿದರು.

ನಿವೃತ್ತಿ ? : ಇದೇ ವೇಳೆ ಎಸ್‌.ಟಿ. ಸೋಮಶೇಖರ್‌ ಹಾಗೂ ಎಂ.ಟಿ.ಬಿ. ನಾಗರಾಜ್‌ ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ನಮಗೆ ಬಿಜೆಪಿಗೆ ಹೋಗುವ ಬಗ್ಗೆ ಯಾವುದೇ ಒಲವಿಲ್ಲ. ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಂದ ತೀವ್ರ ಬೇಸರವಾಗಿದೆ. 

ಕ್ಷೇತ್ರದ ಜನರೊಂದಿಗೆ ಚರ್ಚಿಸಿ ರಾಜಕೀಯ ಜೀವನಕ್ಕೆ ವಿದಾಯ ಹೇಳುತ್ತೇವೆ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ.