ಬೆಂಗಳೂರು (ಆ. 04): ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌-ಜೆಡಿಎಸ್‌ನ ಹಲವು ಅತೃಪ್ತ ಶಾಸಕರು ರಮೇಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ  ಬಿಜೆಪಿ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಈ ವೇಳೆ ಶಾಸಕರ ಅನರ್ಹತೆ ಕುರಿತು ಸುಪ್ರೀಂಕೋರ್ಟ್‌ ಮುಂದಿರುವ ಪ್ರಕರಣದ ಅರ್ಜಿ ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನರ್ಹತೆಯಿಂದ ಪಾರಾಗಲು ಯಾವ ಆಧಾರಗಳ ಮೇಲೆ ಮುಂದಡಿ ಇಡಬೇಕು ಎಂಬ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಯಿತು ಎಂದು ತಿಳಿದುಬಂದಿದೆ.

ಗೋಕಾಕ್‌ ಶಾಸಕ ರಮೇಶ್‌ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌, ಕೆ.ಆರ್‌. ಪೇಟೆಯ ನಾರಾಯಣಗೌಡ, ಯಶವಂತಪುರದ ಎಸ್‌.ಟಿ.ಸೋಮಶೇಖರ್‌, ಮಹಾಲಕ್ಷ್ಮೇ ಬಡಾವಣೆಯ ಕೆ. ಗೋಪಾಲಯ್ಯ ಅವರು ಸಭೆ ನಡೆಸಿದ್ದಾರೆ.

ಈ ವೇಳೆ ಬಿಜೆಪಿ ನಾಯಕರಾದ ಸಿ.ಪಿ. ಯೋಗೇಶ್ವರ್‌, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಸಂತೋಷ್‌ ಅವರೂ ಹಾಜರಿದ್ದರು. ಹೀಗಾಗಿ ಶಾಸಕರು ಅನರ್ಹಗೊಂಡ ಬಳಿಕ ಬಿಜೆಪಿ ನಾಯಕರೊಂದಿಗೆ ನಡೆಸಿದ ಮೊದಲ ಸಭೆ ಎಂದೇ ಹೇಳಲಾಗುತ್ತಿದೆ.

ಸಭೆಯಲ್ಲಿ ಸ್ಪೀಕರ್‌ ಅನರ್ಹತೆ ಆದೇಶ ಪ್ರಶ್ನಿಸುವ ಕುರಿತ ಸುಪ್ರೀಂಕೋರ್ಟ್‌ ವಿಚಾರಣೆ ಮಾತ್ರವಲ್ಲದೆ ಆಯಾ ಕ್ಷೇತ್ರಗಳಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ಮಾಡಲಾಯಿತು. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಅತೃಪ್ತ ಶಾಸಕರನ್ನು ಶತಾಯಗತಾಯ ಉಪ ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೀವ್ರ ಸಿದ್ಧತೆ ನಡೆಸುತ್ತಿದೆ.

ಕಾಂಗ್ರೆಸ್‌ ಈಗಾಗಲೇ ಹದಿನೇಳು ಕ್ಷೇತ್ರಗಳಿಗೂ ಕಾಂಗ್ರೆಸ್‌ ಹಿರಿಯ ನಾಯಕರನ್ನು ವೀಕ್ಷಕರನ್ನಾಗಿ ನೇಮಿಸಿ, ಚುನಾವಣಾ ಹೋರಾಟಕ್ಕೆ ಚಾಲನೆ ನೀಡಿದೆ. ಮತ್ತೊಂದೆ ಜೆಡಿಎಸ್‌ ಕೂಡ ತನ್ನ ಮೂರು ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲ್ಲಬೇಕು ಎಂದು ಕೆಲಸ ಶುರು ಮಾಡಿದೆ. ಕೆ.ಆರ್‌. ಪೇಟೆ ಕ್ಷೇತ್ರಕ್ಕೆ ಶನಿವಾರ ಖುದ್ದು ಎಚ್‌.ಡಿ. ಕುಮಾರಸ್ವಾಮಿ ಅವರೇ ಭೇಟಿ ನೀಡಿದ್ದಾರೆ. ಹೀಗಾಗಿ ಉಪ ಚುನಾವಣೆಯಲ್ಲಿ ತಾವು ಅಥವಾ ತಮಗೆ ಅವಕಾಶ ಸಿಗದಿದ್ದರೆ ತಮ್ಮವರನ್ನು ಕಣಕ್ಕಿಳಿಸಿ ಗೆಲ್ಲಲು ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆಯೂ ಪ್ರಾಥಮಿಕ ಚರ್ಚೆ ನಡೆಯಿತೆಂದು ತಿಳಿದುಬಂದಿದೆ.

ಶಾಸಕರ ಪರ ನಾವಿದ್ದೇವೆ:

 ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌,ಅನರ್ಹ ಶಾಸಕರ ಮುಂದಿನ ರಾಜಕೀಯ ನಡೆ ಕುರಿತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ, ಎಂಟಿಬಿ ನಾಗರಾಜ್‌ ಜತೆ ಸೇರಿ ಈಗಾಗಲೇ ಚರ್ಚೆ ಮಾಡಿದ್ದೇವೆ. ಅವರು ನಮಗೆ ಸಹಕಾರ ನೀಡಿದ್ದಾರೆ. ಅಂತೆಯೇ ನಾವು ಅವರ ಪರವಾಗಿ ಇದ್ದೇವೆ. ನ್ಯಾಯಾಲಯದಲ್ಲಿ ಯಾವ ತೀರ್ಪು ಬರಲಿದೆ ಅನ್ನೋದನ್ನು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದರು.