Asianet Suvarna News Asianet Suvarna News

17 ಅನರ್ಹ ಶಾಸಕರಿಗೆ ತಳಮಳ! ಉಪ ಚುನಾವಣೆ ಬಂದರೆ ಮಾಡೋದೇನು?

ಅನರ್ಹಗೊಳಿಸಿರುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ತಡವಾಗುತ್ತಿರುವುದರಿಂದ ಅನರ್ಹ ಶಾಸಕರಲ್ಲಿ ತೀವ್ರ ತಳಮಳ ಉಂಟಾಗಿದೆ. 

Disqualified Leaders Tensed Over Supreme Court Hearing Postponed
Author
Bengaluru, First Published Sep 15, 2019, 8:45 AM IST

ಬೆಂಗಳೂರು [ಸೆ.15]:  ವಿಧಾನಸಭೆ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿರುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ತಡವಾಗುತ್ತಿರುವುದರಿಂದ ಅನರ್ಹ ಶಾಸಕರು ತೀವ್ರ ತಳಮಳಕ್ಕೆ ಒಳಗಾಗಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎರಡು ತಿಂಗಳಾಗುತ್ತಾ ಬಂದಿದ್ದರೂ ಸುಪ್ರೀಂಕೋರ್ಟ್‌ ವಿಚಾರಣೆ ಕೈಗೆತ್ತಿಕೊಳ್ಳುತ್ತಿಲ್ಲ. ಒಂದು ವೇಳೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ನಡೆಸಲು ಮುಂದಾದರೆ ತಮ್ಮ ಭವಿಷ್ಯವೇನು ಎಂಬ ಆತಂಕ ಅವರಲ್ಲಿ ಕಾಡತೊಡಗಿದೆ ಎನ್ನಲಾಗುತ್ತಿದೆ.

ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ವೇಳೆ ಹಾಗೂ ನಂತರ ನಡೆದ ಕಾನೂನು ಹೋರಾಟದ ಆರಂಭದಲ್ಲಿ ಬಿಜೆಪಿ ನಾಯಕರು ತಮ್ಮ ಜೊತೆ ಇದ್ದ ರೀತಿಯಲ್ಲಿ ಈಗಿಲ್ಲ, ಬದಲಿಗೆ ಕಡೆಗಣಿಸುತ್ತಿದ್ದಾರೆ ಎಂಬ ಬೇಸರ ಅವರಲ್ಲಿ ಮೂಡತೊಡಗಿದೆ. ಇದರ ಜತೆಗೆ ಸುಪ್ರೀಂಕೋರ್ಟ್‌ ಸಹ ತಮ್ಮ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ತೆಗೆದುಕೊಳ್ಳುತ್ತಿಲ್ಲ. ‘ಅರ್ಜಿಯ ವಿಚಾರಣೆಗೆ ತರಾತುರಿ ಯಾಕೆ’ ಎಂದು ಪ್ರಶ್ನಿಸುತ್ತಿದೆ. ತಮ್ಮ ಪರ ವಕೀಲರು ಇನ್ನಷ್ಟುಪರಿಣಾಮಕಾರಿಯಾಗಿ ಪ್ರಕರಣ ವಿಚಾರಣೆಗೆ ಬರುವ ರೀತಿಯಲ್ಲಿ ಪ್ರಯತ್ನ ಮಾಡುತ್ತಿಲ್ಲವೇ ಎಂಬ ಅನುಮಾನ ಅವರಲ್ಲಿ ಸಣ್ಣದಾಗಿ ಮೂಡತೊಡಗಿದೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಖಾಲಿ ಇರುವ ವಿಧಾನಸಭಾ ಕ್ಷೇತ್ರಗಳನ್ನು ಆರು ತಿಂಗಳೊಳಗೆ ಭರ್ತಿ ಮಾಡಲು ಅವಕಾಶವಿದೆ. ಈಗಾಗಲೇ ಎರಡು ತಿಂಗಳು ಕಳೆದುಹೋಗಿದೆ. ಉಳಿದ ನಾಲ್ಕು ತಿಂಗಳೊಳಗೆ ಸುಪ್ರೀಂಕೋರ್ಟ್‌ ಪ್ರಕರಣವನ್ನು ಇತ್ಯರ್ಥಪಡಿಸಿದರೆ ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದು. ಇಲ್ಲದಿದ್ದರೆ ಕಷ್ಟಎಂಬುದು ಅನರ್ಹಗೊಂಡಿರುವ ಶಾಸಕರ ಪ್ರಮುಖ ಆತಂಕ. ಒಂದು ವೇಳೆ ಈ ಅವಧಿಯೊಳಗೆ ಪ್ರಕರಣ ಇತ್ಯರ್ಥವಾಗದೇ ಇದ್ದರೆ ಕುಟುಂಬದ ಸದಸ್ಯರನ್ನೇ ಚುನಾವಣೆಗೆ ನಿಲ್ಲಿಸುವುದು ಅನಿವಾರ್ಯವಾಗುತ್ತದೆ. ಹಾಗೆಂದು ಎಲ್ಲರೂ ತಮ್ಮ ಕುಟುಂಬದ ಸದಸ್ಯರನ್ನು ನಿಲ್ಲಿಸುವ ಸ್ಥಿತಿಯಲ್ಲಿ ಇಲ್ಲ.

ಮುಂದಿನ ಚುನಾವಣೆ ದೃಷ್ಟಿಯಿಂದ ಕ್ಷೇತ್ರಕ್ಕೆ ಬೇಕಾದ ಅನುದಾನ ಪಡೆದುಕೊಳ್ಳುವಲ್ಲಿ ಅನೇಕರು ಯಶಸ್ವಿಯಾಗಿದ್ದಾರೆ. ಚುನಾವಣೆಗೂ ಸಹ ನಿಧಾನವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪುನಃ ಸ್ಪರ್ಧಿಸಬೇಕಾದರೆ ಸುಪ್ರೀಂಕೋರ್ಟ್‌ ಆದಷ್ಟುಬೇಗ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು ಇತ್ಯರ್ಥ ಮಾಡಬೇಕಾಗುತ್ತದೆ. ಆದರೆ ಪ್ರಕರಣದ ಇತ್ಯರ್ಥಕ್ಕೆ ಬಿಜೆಪಿ ನಾಯಕರು ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂಬ ಬೇಸರ ಅವರಲ್ಲಿ ಮಡುಗಟ್ಟುತ್ತಿದೆ ಎಂದು ಹೇಳಲಾಗಿದೆ.

ಈ ನಿಟ್ಟಿನಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಶುಕ್ರವಾರ ಡಾ.ಸುಧಾಕರ್‌ ಅವರ ಬೆಂಗಳೂರಿನ ನಿವಾಸದಲ್ಲಿ ಅನರ್ಹಗೊಂಡಿರುವ ಶಾಸಕರಾದ ಎಂಟಿಬಿ ನಾಗರಾಜ್‌, ಬಿ.ಸಿ. ಪಾಟೀಲ್‌, ಮುನಿರತ್ನ, ಪ್ರತಾಪಗೌಡ ಪಾಟೀಲ್‌ ಸೇರಿದಂತೆ ಅನೇಕ ಶಾಸಕರು ಸಭೆ ನಡೆಸಿದ್ದರು.

Follow Us:
Download App:
  • android
  • ios