ಬೆಂಗಳೂರು, [ಆ.23]: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಅನರ್ಹಗೊಳಿರುವ ಬಗ್ಗೆ ಸುಪ್ರೀಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ರೆ, ಸುಪ್ರೀಂಕೋರ್ಟ್ ಅನರ್ಹ ಶಾಸಕ ವಿಚಾರಣೆ ವಿಳಂಬವಾಗುತ್ತಿದೆ.

ಈ ಬಗ್ಗೆ ವಕೀಲರ ಜತೆ ಚರ್ಚಿಸಲು ಎಲ್ಲಾ ಅನರ್ಹ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇದರ ಮಧ್ಯೆ ಇಂದು [ಶುಕ್ರವಾರ] ಕಾಂಗ್ರೆಸ್ ನಿಂದ ಅನರ್ಹಗೊಂಡಿರುವ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ದೆಹಲಿಯಲ್ಲಿ ಸುದ್ದಿಗಾರರೊದಿಗೆ ಮಾತನಾಡುವ ವೇಳೆ ಆತಂಕ ವ್ಯಕ್ತಪಡಿಸಿದರು.

ಅನರ್ಹ ಶಾಸಕರ ದಿಢೀರ್ ದೆಹಲಿ ಟೂರ್ ಹಿಂದಿನ ರಹಸ್ಯವೇನು? ಇಲ್ಲಿದೆ ಅಸಲಿ ಕಾರಣ

ಕೋರ್ಟಿನಲ್ಲಿ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಸಹಜವಾಗಿ ಆತಂಕವಾಗುತ್ತಿದೆ. ಅದಕ್ಕಾಗಿಯೇ ಎಲ್ಲಾ ಶಾಸಕರು ದೆಹಲಿಗೆ ಬಂದಿದ್ದು,  ಯಾಕೆ ವಿಳಂಬವಾಗ್ತಿದೆ ಎಂದು ವಕೀಲರ ಜತೆ ಚರ್ಚೆ ನಡೆಸಿದ್ದೇವೆ ಎಂದರು.

ಎಲ್ಲರೂ ಒಟ್ಟಾಗಿ ಬಂದು ಕಾರಣ ಹುಡುಕುವ ಪ್ರಯತ್ನ ಮಾಡಿದ್ದೇವೆ. ವಕೀಲರು ಸೋಮವಾರ ನಮ್ಮ ಕೇಸು ಬರುತ್ತೆ ಎಂದಿದ್ದಾರೆ. ನಾವಿನ್ನೂ ಬಿಜೆಪಿ ಸೇರಿಲ್ಲ, ಹಾಗಾಗಿ ಅಮಿತ್ ಶಾ ಭೇಟಿ ಪ್ರಶ್ನೆ ಇಲ್ಲ ಮತ್ತು  ಯಡಿಯೂರಪ್ಪ ಅವರನ್ನು ಕೂಡ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥ ಆದ ಮೇಲೆ‌ ಮುಂದಿನದನ್ನು ನಿರ್ಧರಿಸುತ್ತೇವೆ ಎಂದು ಹೇಳಿದರು.