ಬೆಂಗಳೂರು[ಆ.01]: ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡು, ಸದ್ಯ ಅನರ್ಹರಾಗಿರುವ ಶಾಸಕ ಮುನಿರತ್ನ ಹಾಗೂ ಡಿಕೆ ಶಿವಕುಮಾರ್ ರಸ್ತೆಯಲ್ಲಿ ಅಚಾನಕ್ಕಾಗಿ ಭೇಟಿಯಾದ ಘಟನೆ ನಡೆದಿದೆ.

ಹೌದು ಆಕಸ್ಮಿಕವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಹಾಗೂ ನರ್ಹ ಶಾಸಕ ಮುನಿರತ್ನ ನಡುರಸ್ತೆಯಲ್ಲಿ ಮುಖಾಮುಕಿಯಾಗಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ವಾಹನದಿಂದಿಳಿದು ಸರ್ಕಾರ ಪತನದ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ಡಿಕೆಶಿ 'ಯಾಕ್ರಯ್ಯ ಹೀಗೆ ಮಾಡಿದ್ರಿ?' ಎಂದು ಪ್ರಶ್ನಿಸಿದ್ದಾರೆ. ಈ ವೇಳೆ 'ನಾವು ಹೋಗದಿದ್ದರೂ, ಜೆಡಿಎಸ್ ನವರು ಪಕ್ಷ ಬಿಟ್ಟು ಹೋಗೋದಕ್ಕೆ ರೆಡಿ ಇದ್ರು. ಸರ್ಕಾರ ಈಗ ಪತನವಾಗೋ ಬದಲು ನಾಲ್ಕು ದಿನ ತಡವಾಗ್ತಿತ್ತು ಅಷ್ಟೇ ಸರ್. ನಮ್ಮ ಮೇಲೆ ನೀವು ಕೂಗಾಡಿದ್ರೆ ಏನ್ ಪ್ರಯೋಜನ? ಈ ಸರ್ಕಾರ ಇರೋದು ಜೆಡಿಎಸ್ ನವರಿಗೆ ಇಷ್ಟ ಇರಲಿಲ್ಲ. ನಾವು ಹೋಗದಿದ್ರೆ ಜೆಡಿಎಸ್ ನ ದೊಡ್ಡ ತಂಡವೇ ರೆಡಿಯಾಗಿ ನಿಂತಿತ್ತು. ಮಾತುಕತೆ ನಡೆಸಲಾಗದೆ ನಾವು ಹೋಗಿದ್ದು' ಎಂದು ಮುನಿರತ್ನ ಸವಿಸ್ತಾರವಾಗಿಯೇ ಉತ್ತರಿಸಿದ್ದಾರೆ.

ಮುನಿರತ್ನ ನೀಡಿದ ವಿವರಣೆ ಕೇಳಿಸಿಕೊಂಡ ಡಿಕೆಶಿ 'ಒಳ್ಳೆಯದಾಗಲಿ' ಎಂದು ಹೇಳಿ ಅಲ್ಲಿಂದ ಮುಂದೆ ತೆರಳಿದ್ದಾರೆ.

ಒಂದು ತಿಂಗಳ ಹಿಂದೆ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ದೋಸ್ತಿ ನಾಯಕರು ಅತೃಪ್ತ ಶಾಸಕರ ಮನವೊಲಿಸಲು ನಾನಾ ಪ್ರಯತ್ನ ಮಾಡಿದ್ದರಾದರೂ ಯವುದೂ ಫಲಿಸಿರಲಿಲ್ಲ. ಅಂತಿಮವಾಗಿ ಬೇರೆ ದಾರಿ ಕಾಣದ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಿದ್ದರು, ಆದರೆ ಬಹುಮತವಿಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದರು. ಈ ರಾಜಕೀಯ ಪ್ರಹಸನದ ಬಳಿಕ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.