ಬೆಂಗಳೂರು[ಅ.01]: ದಿನೇಶ್‌ ಗುಂಡೂರಾವ್‌ ಪಕ್ಷದ ಅಧ್ಯಕ್ಷರಾಗಿರುವ ತನಕ ಕಾಂಗ್ರೆಸ್‌ ಪಕ್ಷ ಉದ್ಧಾರ ಆಗುವುದಿಲ್ಲ. ದಿನೇಶ್‌ ಗುಂಡೂರಾವ್‌ ಸರಿ ಇದ್ದಿದ್ದರೆ ನಾವು ಪಕ್ಷ ಬಿಟ್ಟು ಹೊರಬರುವ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ ಎಂದು ಹಿರೇಕೆರೂರು ಕ್ಷೇತ್ರದ ಅನರ್ಹಗೊಂಡಿರುವ ಶಾಸಕ ಬಿ.ಸಿ. ಪಾಟೀಲ್‌ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್‌ ಗುಂಡೂರಾವ್‌ ಪಕ್ಷದ ಅಧ್ಯಕ್ಷರಾಗಿರುವವರೆಗೂ ಪಕ್ಷದ ಪರಿಸ್ಥಿತಿ ಹೀಗೆಯೇ ಮುಂದುವರೆಯುತ್ತದೆ. ಗುಂಡೂರಾವ್‌ ಅಧ್ಯಕ್ಷರಾಗಿ ಅಧಿಕಾರ ಪಡೆಯುವ ಮೊದಲು ಒಂಬತ್ತು ಮಂದಿ ಸಂಸದರಿದ್ದರು, ಈಗ ಒಬ್ಬರೇ ಒಬ್ಬರು ಇದ್ದಾರೆ. ದಿನೇಶ್‌ ಗುಂಡೂರಾವ್‌ ಅವರಿಂದಲೇ ಮೈತ್ರಿ ಸರ್ಕಾರವೂ ಪತನವಾಯಿತು. ದಿನೇಶ್‌ ಗುಂಡೂರಾವ್‌ ಸರಿ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತಿತ್ತು ಎಂದು ಹೇಳಿದರು.

ದಿನೇಶ್‌ ಗುಂಡೂರಾವ್‌ ಅವರ ಕುರಿತು ಎಸ್‌.ಟಿ. ಸೋಮಶೇಖರ್‌ ಹೇಳಿಕೆ ಸರಿ ಇದೆ. ಅಧ್ಯಕ್ಷರಾದವರು ಒಂದು ಕಡೆ ವಾಲಬಾರದು. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ರೀತಿಯಲ್ಲಿ ಮಾಡಬಾರದು. ಎಲ್ಲರನ್ನೂ ಸಮಾನ ಚಿತ್ತದಿಂದ ನೋಡಬೇಕು, ಜತೆಗೆ ಹೇಳಿದಂತೆ ನಡೆದುಕೊಳ್ಳಬೇಕು ಎಂದರು.

ಅನರ್ಹಗೊಂಡಿರುವ ಶಾಸಕರಿಗೆ ಟಿಕೆಟ್‌ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿಕೆ ಕೊಟ್ಟಿರುವುದು ಸಂತೋಷ ತಂದಿದೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚಿಸಿ ನಿರ್ಧಾರ:

ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ. ಬಳಿಕ ನಾವೆಲ್ಲರೂ ಚರ್ಚೆ ಮಾಡಿ ಬಿಜೆಪಿ ಸೇರ್ಪಡೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅನರ್ಹಗೊಂಡಿರುವ ಶಾಸಕರ ಬಗ್ಗೆ ಉಮೇಶ್‌ ಕತ್ತಿ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ನಮ್ಮ ದಾರಿ ನಮಗೆ ಅವರ ದಾರಿ ಅವರಿಗೆ ಎಂದು ಹೇಳಿದ್ದಾರೆ. ಅಲ್ಲದೆ ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಟಿಕೆಟ್‌ ಅಂತಿಮವಾಗಲಿದೆ ಎಂದಿದ್ದಾರೆ. ಉಮೇಶ್‌ ಕತ್ತಿ ಅವರ ಹೇಳಿಕೆ ಸರಿಯಿಲ್ಲ. ಅವರ ಹೇಳಿಕೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.