ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ  ಬ್ರೇಕ್ ಹಾಕಲು ವರಿಷ್ಠರು ತೀರ್ಮಾನಿಸಿದ್ದು ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಶಾಸಕರು, ಸಂಸದರ, ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನಿನ್ನೆ, ರಾತ್ರಿ ಮರುಳೀಧರ್ ರಾವ್ ಅವರನ್ನ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇಂದು ಕೂಡ ಅಭಿಪ್ರಾಯ ಸಂಗ್ರಹ ಮುಂದುವರೆಯಲಿದೆ

ಬೆಂಗಳೂರು(ಎ.30): ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ಬ್ರೇಕ್ ಹಾಕಲು ವರಿಷ್ಠರು ತೀರ್ಮಾನಿಸಿದ್ದು ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಶಾಸಕರು, ಸಂಸದರ, ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನಿನ್ನೆ, ರಾತ್ರಿ ಮರುಳೀಧರ್ ರಾವ್ ಅವರನ್ನ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇಂದು ಕೂಡ ಅಭಿಪ್ರಾಯ ಸಂಗ್ರಹ ಮುಂದುವರೆಯಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ ನಡುವಿನ ಗುದ್ದಾಟ ಮುಂದುವರೆದಿದೆ. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಅತೃಪ್ತರ ಸಭೆ ಬಗ್ಗೆ ದೂರು ನೀಡಲು ಬಿಎಸ್‍ವೈ ದೆಹಲಿಗೆ ತೆರಳಿದರು. ಆದರೆ, ವರಿಷ್ಠರು ಸಿಗದ ಹಿನ್ನಲೆಯಲ್ಲಿ ನಿನ್ನೆ ಬರಿಗೈಲಿ ವಾಪಸ್ಸಾಗಿದ್ದರು. ಬಿಜೆಪಿ ಹೈಕಮಾಂಡ್ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಅವರನ್ನು ಕಳಿಸಿದ್ದು, ರಾಜ್ಯದ ಸಮಸ್ಯೆ ಅರಿಯಲು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ. ಅದರಂತೆ ಬೆಂಗಳೂರಿಗೆ ಆಗಮಿಸಿರುವ ಮುರುಳೀಧರ್ ರಾವ್ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಇನ್ನು, ಉಸ್ತುವಾರಿ ಮುರುಳೀಧರ್ ರಾವ್ ಯಡಿಯೂರಪ್ಪ ಹಾಗೂ ಈಶ್ವರಪ್ಪರನ್ನ ದೂರ ಇಟ್ಟು , ಮಾಜಿ,ಹಾಲಿ ಶಾಸಕರು,ಸಂಸದರು, ವಿವಿಧ ಘಟಕಗಳ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ನಿನ್ನೆ ಸಂಜೆ ಅಭಿಪ್ರಾಯ ಸಂಗ್ರಹಿಸುವಾಗ ಶಾಸಕರು ಈಶ್ವರಪ್ಪ ಬಾಯಿಗೆ ಬೀಗ ಹಾಕಿ, ಇಲ್ಲದೆ ಹೋದ್ರೆ ಪಕ್ಷದಿಂದ ಉಚ್ಚಾಟಿಸಿ ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮುರುಳೀಧರ್ ರಾವ್ ಯಾರೂ ಕೂಡ ಪರ ವಿರೋಧದ ಹೇಳಿಕೆ ನೀಡಬಾರದು. ಒಂದು ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು, ಈ ಎಚ್ಚರಿಕೆಯ ನಡುವೆಯೂ ಮಾಜಿ ಸಂಸದ ಬಸವರಾಜ್ ಮಾಧ್ಯಮಗಳ ಜೊತೆ ಮಾತನಾಡಿ, ಈಶ್ವರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ನಿನ್ನೆ ಬೆಂಗಳೂರಿನ ಪಕ್ಷದ ಕಚೇರಿಗೆ ಮುರುಳೀಧರ್ ರಾವ್ ಆಗಮನಕ್ಕೂ ಮುನ್ನ ಪಕ್ಷದ ಕಚೇರಿಗೆ ಆರ್ ಎಸ್ಎಸ್ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಆಗಮಿಸಿದ್ರು. ಆದ್ರೆ, ಮುರಳೀಧರ್ ರಾವ್ ಬರೋ ಮುನ್ಸೂಚನೆ ಅರಿತ ಸಂತೋಷ್ ಅಲ್ಲಿಂದ ಕಾಲ್ಕಿತ್ತರು.

ಇಂದು ಕೂಡ ಮುರುಳೀಧರ್ ರಾವ್ ರಾಜ್ಯ ಬಿಜೆಪಿ ನಾಯಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಿನ್ನೆ ಯಡಿಯೂರಪ್ಪನವರು, ರಾವ್ ರನ್ನ ಭೇಟಿಯಾಗಿ ಚರ್ಚಿಸಿದ್ದು ಹೊರತುಪಡಿಸಿದ್ರೆ, ಬಿಎಸ್ ವೈ ಹಾಗೂ ಈಶ್ವರಪ್ಪರನ್ನು ಒಟ್ಟಿಗೆ ಭೇಟಿಯಾಗಿ ಮುರುಳೀಧರ್ ರಾವ್ ಚರ್ಚೆ ನಡೆಸುವ ಸಾಧ್ಯತೆ ಕಡಿಮೆ.

ಒಟ್ಟಿನಲ್ಲಿ, ಎರಡನೇ ಹಂತದ ನಾಯಕರ ಅಭಿಪ್ರಾಯ ಆಲಿಸಿ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ರಾವ್ ವರದಿ ನೀಡಲಿದ್ದಾರೆ ಎನ್ನಲಾಗಿದೆ.