ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ನೇತೃತ್ವದ ನಾಲ್ವರು ಮುಖಂಡರ ಸಮಿತಿ ಇದುವರೆಗೂ ತನ್ನ ಕೆಲಸ ಆರಂಭಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅತೃಪ್ತ ಮುಖಂಡರು, ಈ ತಿಂಗಳ 10ರ ನಂತರ ತಮ್ಮ ಮುಂದಿನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಬೆಂಗಳೂರು (ಫೆ.07): ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಉದ್ಭವಿಸಿದ್ದ ಅಸಮಾಧಾನ ಮತ್ತೆ ಭುಗಿಲೇಳುವ ಸಾಧ್ಯತೆಯಿದ್ದು, ಸೋಮವಾರ ಪಕ್ಷದ ಅತೃಪ್ತ ಮುಖಂಡರು ದಿಢೀರ್ ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್ ನೇತೃತ್ವದ ನಾಲ್ವರು ಮುಖಂಡರ ಸಮಿತಿ ಇದುವರೆಗೂ ತನ್ನ ಕೆಲಸ ಆರಂಭಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅತೃಪ್ತ ಮುಖಂಡರು, ಈ ತಿಂಗಳ 10ರ ನಂತರ ತಮ್ಮ ಮುಂದಿನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ವರಿಷ್ಠರು ನೀಡಿರುವ ಸೂಚನೆ ಅನುಸಾರ ಫೆ.10ರೊಳಗೆ ಸಮಿತಿಯ ಸಭೆ ನಡೆಯದಿದ್ದಲ್ಲಿ ನಂತರ ಮುರಳೀಧರರಾವ್ ಭೇಟಿ ಮಾಡು ವುದು ಅಥವಾ ದೆಹಲಿಗೆ ಮುಖಂಡರ ನಿಯೋಗ ಕೊಂಡೊ ಯ್ಯುವುದು ಅಥವಾ ಅಧ್ಯಕ್ಷರಿಗೆ ಪತ್ರ ಬರೆದು ವಿಷಯವನ್ನು ಅವರ ಗಮನಕ್ಕೆ ತರುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್, ಸೋಮಣ್ಣ ಬೇವಿನಮರದ, ವಿಧಾನಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಇತರರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ನಂತರ ನೇಮಕ ಮಾಡಿದ ಪದಾಧಿಕಾರಿಗಳ ಪಟ್ಟಿಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರಿಹಾರೋಪಾಯ ಕಂಡು ಹಿಡಿಯಲು ಕಳೆದ ಜ.27ರಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಪಾಲ್ಗೊಂಡಿದ್ದ ಅತೃಪ್ತ ಮುಖಂಡರ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಪದಾಧಿಕಾರಿಗಳ ನೇಮಕದಲ್ಲಾಗಿರುವ ಲೋಪ ದೋಷಗಳ ಬಗ್ಗೆ ವರಿಷ್ಠರ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಉಸ್ತುವಾರಿ ಮುರಳೀಧರರಾವ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಮತ್ತು ಸಂಘ ಪರಿವಾರದ ಮುಖಂಡ ಮುಕುಂದ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಫೆ.10ರೊಳಗಾಗಿ ಸಭೆ ಸೇರಿ ಗೊಂದಲ ಪರಿಹರಿಸಲು ಮುಂದಾಗಬೇಕು. ಗೊಂದಲ ಉಂಟಾಗಿರುವ ಆಯಾ ಜಿಲ್ಲೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕು ಎಂಬ ಸೂಚನೆಯನ್ನೂ ರಾಷ್ಟ್ರೀಯ ಅಧ್ಯಕ್ಷರು ನೀಡಿದ್ದರು.
ಗೋವಾ ಚುನಾವಣೆ ಮುಗಿದ ನಂತರ ಸಭೆ ಸೇರುವ ಬಗ್ಗೆ ಪ್ರಸ್ತಾಪವೂ ಆಗಿತ್ತು. ಈಗ ಚುನಾವಣೆ ಮುಗಿದು ಎರಡು ದಿನಗಳಾದರೂ ಈವರೆಗೆ ಸಭೆ ಸೇರುವ ಸಾಧ್ಯತೆ ಕಂಡು ಬರುತ್ತಿಲ್ಲ. ಮೇಲಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. 10ರಂದೇ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.
ವರಿಷ್ಠರು ನೀಡಿರುವ ಗಡುವಿಗೆ ಇನ್ನು ನಾಲ್ಕು ದಿನಗಳು ಉಳಿದಿದ್ದರೂ ಇದುವರೆಗೆ ಸಭೆ ಸೇರುವ ಲಕ್ಷಣ ಕಂಡು ಬರುತ್ತಿಲ್ಲ. ಈ ಅನುಮಾನದ ಹಿನ್ನೆಲೆಯಲ್ಲಿ ಪಕ್ಷದ ಅತೃಪ್ತ ಮುಖಂಡರು ಸಭೆ ಸೇರಿ ಸಮಾಲೋಚನೆ ನಡೆಸಿದರು.
