ನವದೆಹಲಿ[ಆ. 04]   2019 ಲೋಕಸಭೆ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಮಾಡದೆ ಪಕ್ಷ ತೊರೆಯುವ ಸೂಚನೆ ನೀಡಿದ್ದ ಆಲ್ಕಾ ಲಂಬಾ ಅಂತಿಮವಾಗಿ ಹೊರಹೋಗಿದ್ದಾರೆ. ಪಕ್ಷದಿಂದ ಹೊರಹೋದರೂ ಶಾಸಕಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ(ಎಎಪಿ)ದ ಪ್ರಾಥಮಿಕ ಸದಸ್ಯತ್ವಕ್ಕೆ ಅಲ್ಕಾ ರಾಜೀನಾಮೆ ಸಲ್ಲಿಸಿದ್ದಾರೆ. ಚಾಂದಿನಿ ಚೌಕ್ ಕ್ಷೇತ್ರದ ಶಾಸಕಿ ಲಂಬಾ ಅವರು ರಾಜೀನಾಮೆ ಬಳಿಕ ಮಾತನಾಡಿ, ನನ್ನ ಕ್ಷೇತ್ರದ ಜನತೆ ಜೊತೆ ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಸಿ, ತೀರ್ಮಾನ ಕೈಗೊಂಡಿದ್ದೇನೆ, ಎಎಪಿಯ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಳಾಗಿ, ಶಾಸಕಿಯಾಗಿ ಉಳಿಯುತ್ತೇನೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದೇನೆ’ ಎಂದು ತಿಳಿಸಿದ್ದಾರೆ.

ಬಿಜೆಪಿಯನ್ನು ದೂರ ಇಡುವ ಕಾರಣಕ್ಕೆ ಎಎಪಿಯಲ್ಲಿದ್ದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮ ಬಿಜೆಪಿಯನ್ನು ಅಧಿಕಾರದ ಹತ್ತಿರಕ್ಕೆ ಸುಳಿಯಬಾರದು ಎಂಬುದೇ ನೀತಿ ಆಗಿರುವುದರಿಂದ ಕಾಂಗ್ರೆಸ್ ಸೇರಿ ಅಖಾಡಕ್ಕೆ ಇಳಿದರೆ ತಪ್ಪೇನು? ಎಂದು ಪ್ರಶ್ನೆ ಮಾಡಿದ್ದಾರೆ. ರಾಜೀನಾಮೆ ಸ್ವೀಕರಿಸಲು ಸಿದ್ಧ ಎಂದು ಎಎಪಿ ಟ್ವಿಟರ್‌ನಲ್ಲಿ ಹೇಳಿದೆ.