ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಒಮ್ಮತದಿಂದ ಧ್ವನಿಮತದ ಮೂಲಕ ದಿವ್ಯಾಂಗರ ಹಕ್ಕುಗಳ ವಿಧೇಯಕವನ್ನು ಅಂಗೀಕರಿಸಿದ್ದಾರೆ.

ನವದೆಹಲಿ(ಡಿ.14):ದಿವ್ಯಾಂಗರಿಗೆ ತಾರತಮ್ಯ ಎಸಗಿಸಿದರೆ, ಅಂಥವರು ಇನ್ನು ಕನಿಷ್ಠ 2 ವರ್ಷ ಸೆರೆವಾಸ ಹಾಗೂ ಗರಿಷ್ಠ 5 ಲಕ್ಷ ದಂಡ ತೆರಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ವಿಧೇಯಕ, 2014 ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.

ವಿಶೇಷವೆಂದರೆ, ಅಧಿವೇಶನ ಆರಂಭವಾದಾಗಿನಿಂದ ಈವರೆಗೆ ಗದ್ದಲವನ್ನೇ ಕಂಡ ರಾಜ್ಯಸಭೆಯಲ್ಲಿ ಈ ವಿಧೇಯಕ ಕುರಿತು ಮಾತ್ರ ಒಗ್ಗಟ್ಟು ಕಂಡುಬಂತು. ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಒಮ್ಮತದಿಂದ ಧ್ವನಿಮತದ ಮೂಲಕ ದಿವ್ಯಾಂಗರ ಹಕ್ಕುಗಳ ವಿಧೇಯಕವನ್ನು ಅಂಗೀಕರಿಸಿದ್ದಾರೆ. ಈ ವಿಧೇಯಕದನ್ವಯ, ದಿವ್ಯಾಂಗರ ಬಗ್ಗೆ ತಾರತಮ್ಯ ಎಸಗಿದವರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಸಾವಿರದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ, ಬಿಎಸ್ಪಿ ನಾಯಕಿ ಮಾಯಾವತಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೇರಿದಂತೆ ಬಹುತೇಕ ನಾಯಕರು ಈ ವಿಧೇಯಕ ಆದಷ್ಟು ಬೇಗ ಅಂಗೀಕಾರವಾಗಲಿ ಎಂದು ಒತ್ತಾಯಿಸಿದ್ದು ಕಂಡುಬಂತು.