Asianet Suvarna News Asianet Suvarna News

ಅಮಿತ್‌ ಶಾ ಗಡಿಪಾರಿಗೆ ದಿನೇಶ್‌ ಆಗ್ರಹ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜ್ಯದಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಗಡಿಪಾರು ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

Dinesh Gundurao Slams Amith Shah

ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜ್ಯದಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಗಡಿಪಾರು ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕೆಪಿಸಿಸಿ ವತಿಯಿಂದ ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೆ ಅಮಿತ್‌ ಶಾ ವಿರುದ್ಧ ದೂರು ನೀಡಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆಯಲ್ಲಿ ಶಾ ಅವರು ಧರ್ಮದ ಆಧಾರದ ಮೇಲೆ ಕೋಮು ವೈಷಮ್ಯ ಬಿತ್ತುತ್ತಿರುವ ಬಗ್ಗೆ ಈಗಾಗಲೇ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೀಗ ಶುಕ್ರವಾರ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮೈಸೂರಿನಲ್ಲಿ ಕುಟುಂಬವೊಂದಕ್ಕೆ 5 ಲಕ್ಷ ರು. ಪಾವತಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ಆಯೋಗಕ್ಕೆ ದೂರು:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಹತ್ಯೆಯಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜು ಕುಟುಂಬಕ್ಕೆ 5 ಲಕ್ಷದ ಚೆಕ್‌ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಸಯ್ಯದ್‌ ನಾಸೀರ್‌ ಹುಸೇನ್‌ ನೇತೃತ್ವದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ. ಗೌತಮ್‌ ಅವರು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರಿಗೆ ದೂರು ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಸಂಸದ ಪ್ರತಾಪ್‌ ಸಿಂಹ ಅವರು ಒಂದೂವರೆ ವರ್ಷದ ಹಿಂದೆ ಹತ್ಯೆಯಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜುವಿನ ಮೈಸೂರಿನ ನಿವಾಸಕ್ಕೆ ಶುಕ್ರವಾರ ತೆರಳಿ 5 ಲಕ್ಷ ರು. ಮೊತ್ತದ ಚೆಕ್‌ ಹಸ್ತಾಂತರಿಸಿದ್ದಾರೆ.

ಅಮಿತ್‌ ಶಾ ಮತ್ತು ಇತರೆ ಬಿಜೆಪಿ ನಾಯಕರು ಈ ಹಿಂದೆ ಹಲವಾರು ಬಾರಿ ಮೈಸೂರಿಗೆ ಆಗಮಿಸಿದ್ದರೂ ಸಹ ಮೃತ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜು ನಿವಾಸಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಚುನಾವಣಾ ಹಿತಾಸಕ್ತಿ ಪೂರೈಸಿಕೊಳ್ಳಲು 5 ಲಕ್ಷ ರು. ಮೊತ್ತದ ಚೆಕ್‌ ಮೃತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಹಣದ ಮೂಲಕ ಚುನಾವಣೆಗೆ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡಿರುವ ಯತ್ನ ನೀತಿ ಸಂಹಿತೆಯ ಸ್ಪಷ್ಟಉಲ್ಲಂಘನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಜೀವ್‌ಕುಮಾರ್‌ ಅವರನ್ನು ದೂರು ಸ್ವೀಕರಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಮೈಸೂರು ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ದೂರನ್ನು ವರ್ಗಾಯಿಸಿದರು ಎಂದು ತಿಳಿದುಬಂದಿದೆ.

Follow Us:
Download App:
  • android
  • ios