ನ. 01 ರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಎಂಇಎಸ್‌ನ ಮುಖಂಡರಿಗೆ ಕೊನೆಗೂ ಬುದ್ಧಿ ಬಂದಿದೆ. ಮಹಾನಗರ ಪಾಲಿಕೆ ಸೂಪರ್‌ ಸೀಡ್‌ ಆಗುತ್ತದೆ ಎನ್ನುವ ಭಯ ಕಾಡುತ್ತಿದ್ದು, ಎಂಇಎಸ್‌ನಲ್ಲೇ ಈಗ ಬಿರುಕು ಮೂಡಿದೆ.

ಬೆಳಗಾವಿ (ನ.25): ನ. 01 ರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಎಂಇಎಸ್‌ನ ಮುಖಂಡರಿಗೆ ಕೊನೆಗೂ ಬುದ್ಧಿ ಬಂದಿದೆ. ಮಹಾನಗರ ಪಾಲಿಕೆ ಸೂಪರ್‌ ಸೀಡ್‌ ಆಗುತ್ತದೆ ಎನ್ನುವ ಭಯ ಕಾಡುತ್ತಿದ್ದು, ಎಂಇಎಸ್‌ನಲ್ಲೇ ಈಗ ಬಿರುಕು ಮೂಡಿದೆ.

ಮೇಯರ್‌-ಉಪಮೇಯರ್ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಎಂಇಎಸ್‌ನಲ್ಲಿ ಬಿರುಕು ಕಂಡು ಬಂದಿದೆ. ಸೂಪರ್ ಸೀಡ್ ಆದರೆ ಮತ್ತೆ ಚುನಾವಣೆಗೆಯಾಗುವ ಭಯದಿಂದ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಅವರನ್ನು ಎಂಇಎಸ್‌ನ 14 ಜನ ಮುಖಂಡರು ಭೇಟಿಯಾಗಿದ್ದಾರೆ. ಇಲ್ಲಿನ ಜಾಧವ ನಗರದ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಾಜಿ ಉಪಮೇಯರ್ ಮಿನಾವಾಜ್, ನಾಗೇಶ ಮಂಡೋಳ್ಕರ್, ವಿನಾಯಕ ಗುಂಜಟಕರ್ ನೇತೃತ್ವದಲ್ಲಿ ಇತರ ಸದಸ್ಯರು ಭೇಟಿಯಾಗಿದ್ದಾರೆ. ಮಹಾನಗರ ಪಾಲಿಕೆಯ ಎಂಇಎಸ್ ಸದಸ್ಯರಲ್ಲಿ ಬಿರುಕು ಉಂಟಾಗಿದ್ದು, ಕನ್ನಡ ಸದಸ್ಯರ ಗುಂಪಿಗೆ ಸೇರಲು 14 ಜನ ಎಂಇಎಸ್ ಸದಸ್ಯರು ಸಿದ್ಧರಾಗಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್ ಆಗದಿದ್ದರೆ, ಕನ್ನಡ ಸದಸ್ಯರ ಜೊತೆಗೆ ‌ಅಧಿಕಾರ ಹಂಚಿಕೊಳ್ಳುವ ಕುರಿತು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇನ್ನು ಕರಾಳ ದಿನಾಚರಣೆಯಲ್ಲಿ ಭಾಗಿಯಾದವರ ವಿರುದ್ಧವಷ್ಟೇ ಕ್ರಮಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.