ನವದೆಹಲಿ (ಮೇ 18) : ಕಳೆದ ವರ್ಷದಿಂದೀಚೆಗೆ ಒಂದಾದ ಮೇಲೊಂದು ಸಂಕಷ್ಟಕ್ಕೆ ಸಿಲುಕುತ್ತಿರುವ ಒಂದು ಕಾಲದ ಅತ್ಯಂತ ಶ್ರೀಮಂತ ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಇದೀಗ ದಿವಾಳಿ ಯಂಚಿಗೆ ಬಂದು ನಿಂತಿದೆ. 45 ಸಾವಿರ ಕೋಟಿ ರು. ಸಾಲ ತೀರಿಸಲು ಸಾಧ್ಯವಾಗದೆ ಅನಿಲ್ ಅಂಬಾನಿ ಪರದಾಡುತ್ತಿದ್ದು, ಅವರ ಕಂಪನಿಗಳ ವಿರುದ್ಧ ಎರಿಕ್ಸನ್ ಕಂಪನಿಯು 1150  ಕೋಟಿ ರು. ಸಾಲದ ಹಣಕ್ಕಾಗಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. 

ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಶನ್ ಕಂಪನಿಯು ಟೆಲಿಕಾಂ ಉಪಕರಣಗಳ ಪೂರೈಕೆದಾರ ಎರಿಕ್ಸನ್ ಕಂಪನಿಯಿಂದ ಹಲವು ವರ್ಷ  ಗಳ ಕಾಲ ಸಾಕಷ್ಟು ಸರಕನ್ನು ಖರೀದಿಸಿದೆ. ಆದರೆ, ಅವುಗಳಿಗೆ 1150 ಕೋಟಿ ರು. ಹಣ ಪಾವತಿಸಿಲ್ಲ. 

ಆ ಹಣಕ್ಕಾಗಿ ಎರಿಕ್ಸನ್ ಕಂಪನಿಯು ರಾಷ್ಟ್ರೀಯ ಕಂಪನಿ ಕಾಯ್ದೆಗಳ ನ್ಯಾಯಾಧಿಕರಣದಲ್ಲಿ ರಿಲಯನ್ಸ್ ವಿರುದ್ಧ 3 ದಿವಾಳಿ ಅರ್ಜಿಗಳನ್ನು ಸಲ್ಲಿಸಿದೆ. ಅದರೊಂದಿಗೆ, ಇಷ್ಟು ದಿನ ಹೇಗೋ ಕಾಲ ತಳ್ಳುತ್ತ ಬಂದಿದ್ದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಗಳ ಸ್ಥಿತಿ ಇನ್ನ ಷ್ಟು ಬಿಗಡಾಯಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನಿಲ್ ಅವರ ಸೋದರ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಸಾಕಷ್ಟು  ಲಾಭ ದಲ್ಲಿದ್ದು, ಉದ್ಯಮ ರಂಗದಲ್ಲಿ ಒಂದಾದ ಮೇಲೊಂದು ಮೈಲುಗಲ್ಲನ್ನು ಸ್ಥಾಪಿಸುತ್ತ ಬೆಳೆಯುತ್ತಿದೆ.

ಯಾರೂ ಊಹಿಸಿರದ ದುಸ್ಥಿತಿ: ಧೀರೂಭಾಯಿ ಅಂಬಾನಿ ಸ್ಥಾಪಿಸಿದ ರಿಲಯನ್ಸ್ ಸಮೂಹದ ಕಂಪನಿಗಳು ಭಾರತದ ಖಾಸಗಿ ಉದ್ಯಮ ಲೋಕದ ಅಗ್ರಗಣ್ಯ ಕಂಪನಿಗಳಾಗಿದ್ದವು. ಅವರ ಪುತ್ರರಾದ ಮುಕೇಶ್ ಹಾಗೂ ಅನಿಲ್ 2006 ರಲ್ಲಿ ಹಿಸೆಯಾದಾಗ ಇಬ್ಬರೂ ಬೃಹತ್ ಕಂಪನಿಗಳ ಮಾಲೀಕರಾದರು.

ಆದರೆ, ವರ್ಷದಿಂದ ವರ್ಷಕ್ಕೆ ಮುಕೇಶ್ ಕಂಪನಿಗಳು ಬೆಳೆಯುತ್ತಾ ಹೋದವು ಮತ್ತು ಅನಿಲ್ ಕಂಪನಿಗಳು ತಕ್ಕಮಟ್ಟಿಗೆ ಲಾಭ ದಲ್ಲಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅನಿಲ್ ಸಮೂಹದ ಪ್ರಮುಖ ಕಂಪನಿ ಯಾಗಿರುವ ರಿಲಯನ್ಸ್ ಕಮ್ಯುನಿಕೇಶನ್ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ. ಅವರ ರಿಲಯನ್ಸ್ ಪವರ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ಗಳೂ ಸಾಲದ ಸುಳಿಗೆ ಸಿಲುಕಿವೆ. ಇನ್ನು ಅವರ ಮಾಧ್ಯಮ, ಮನ ರಂಜನೆ, ಸಿಮೆಂಟ್ ಹಾಗೂ ರಸ್ತೆ ನಿರ್ಮಾಣ ಕಂಪನಿಗಳಂತೂ ಸಾಲ ಹಾಗೂ ಇತರ ಸಮಸ್ಯೆಗಳಿಂದ ಬಾಗಿಲು ಮುಚ್ಚಿವೆ. 

ಒಂದು ಕಾಲದಲ್ಲಿ ರಿಲಯನ್ಸ್ ಬ್ರಾಂಡ್ ಅಂದರೆ ಎಲ್ಲರೂ ಹುಬ್ಬೇರಿಸುತ್ತಿದ್ದರು. ಆದರೆ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಗಳ ಸ್ಥಿತಿ ಇಂದು ಯಾರೂ ಊಹಿಸದ ಸ್ಥಿತಿಗೆ ತಲುಪಿದೆ ಎಂದು ಹೇಳಲಾಗುತ್ತಿದೆ.