ನವದೆಹಲಿ(ಸೆ.08): ಭಯೋತ್ಫಾದಕರ ವಿರುದ್ಧ ಹೋರಾಡಲು ಭಾರತೀಯ ಗುಪ್ತಚರ ಇಲಾಖೆಯು ತಮಗೆ ನಕಲಿ ಪಾಸ್’ಪೋರ್ಟ್ ಪಡೆದುಕೊಳ್ಳಲು ನೆರವು ನೀಡಿತ್ತು ಎಂದು ದೆಹಲಿ ಕೋರ್ಟ್’ನಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ.

ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್’ವೊಂದಿಗೆ ಮಾತನಾಡಿದ ರಾಜನ್, ತನಗೆ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಪಾಸ್’ಪೋರ್ಟ್ ಒದಗಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಅಮಾಯಕ ವ್ಯಕ್ತಿಗಳ ಬಲಿಪಡೆಯುವವರ, ದೇಶ ವಿರೋಧಿ ಚಟುವಟಿಕೆ ನಡೆಸುವ ಭಯೋತ್ಫಾದಕರ ವಿರುದ್ಧ ರಾಷ್ಟ್ರೀಯ ಹಿತಾಸಕ್ತಿಯಿಂದ ಹೋರಾಟ ಮಾಡಿದ್ದೇನೆ ಎಂದು ಹೇಳಿದ್ದಾನೆ.

25 ವರ್ಷಗಳಿಂದ ಭೂಗತವಾಗಿದ್ದ ರಾಜನ್’ನನ್ನು ನಕಲಿ ಪಾಸ್’ಪೋರ್ಟ್ ಹೊಂದಿದ ಆರೋಪದಡಿ ಇಂಡೋನೇಷ್ಯಾದಲ್ಲಿ ಕಳೆದ ವರ್ಷವಷ್ಟೇ ಬಂಧಿಸಲಾಗಿತ್ತು.

1993 ಮುಂಭೈ ಸ್ಫೋಟದ ನಂತರ ದೇಶದ ಶಾಂತಿಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದೇನೆ ಎಂದು ರಾಜನ್ ಹೇಳಿದ್ದಾನೆ.

ದೆಹಲಿ ನ್ಯಾಯಾಲಯವು ರಾಜನ್ ಪಾಸ್’ಪೋರ್ಟ್ ಕೇಸ್’ಗೆ ಸಂಬಂಧಿಸಿದಂತೆ ಮೋಸ, ಕ್ರಿಮಿನಲ್ ಫಿತೂರಿ, ಖೋಟಾ ನೋಟು ಚಲಾವಣೆ ಆರೋಪವನ್ನು ಹೊರಿಸಲಾಗಿದೆ.