ಕಾಂಗ್ರೆಸ್‌ನ ಅರ್ಧ ಸದಸ್ಯರು ಮೂರ್ಖರು ಎಂದು ವಾಜಪೇಯಿ ಪಾರ್ಲಿಮೆಂಟಲ್ಲಿ ಹೀಗೆ ಹೇಳಿದ್ದರು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

ನವದೆಹಲಿ[ಡಿ.31]: ಅಟಲ್‌ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್‌ ಬಗ್ಗೆ ಪಾರ್ಲಿಮೆಂಟಲ್ಲಿ ಹೀಗೆ ಹೇಳಿದ್ದರು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಒಮ್ಮೆ ಪಾರ್ಲಿಮೆಂಟಿನಲ್ಲಿ ವಾಜಪೇಯಿ ‘ಕಾಂಗ್ರೆಸ್‌ನ ಅರ್ಧ ಸದಸ್ಯರು ಮೂರ್ಖರು’ ಎಂದು ಹೇಳಿದ್ದರು. ಆಗ ಸಭಾಪತಿ ತಮ್ಮ ಮಾತನ್ನು ವಾಪಸ್‌ ತೆಗೆದುಕೊಳ್ಳುವಂತೆ ಹೇಳಿದಾಗ ‘ಕಾಂಗ್ರೆಸ್‌ನ ಅರ್ಧ ಸದಸ್ಯರು ಮೂರ್ಖರಲ್ಲ ಎಂದಿದ್ದರು’ ಎನ್ನಲಾಗಿದೆ. ಸದ್ಯ ವಾಜಪೇಯಿ ಹೇಳಿದ್ದಾರೆ ಎನ್ನಲಾದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ನಿಜಕ್ಕೂ ಅಟಲ್‌ ಹೀಗೆ ಹೇಳಿದ್ದರೇ ಎಂದು ಕ್ವಿಂಟ್‌ 1962ರ ಪಾರ್ಲಿಮೆಂಟ್‌ ಚರ್ಚೆಯನ್ನು ಅಧಿಕೃತ ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಇದೊಂದು ನಕಲಿ ಹೇಳಿಕೆ ಎಂಬುದು ಸಾಬೀತಾಗಿದೆ. ಆಗ ವಾಜಪೇಯಿ ರಾಜ್ಯಸಭೆಯ ಸದಸ್ಯರಾಗಿದ್ದರು. ಅಲ್ಲದೆ ಹಿರಿಯ ರಾಜಕೀಯ ನಿರೂಪಕಿ ಆರತಿ ಜೇರತ್‌ ವಾಜಪೇಯಿ ಈ ಹೇಳಿಕೆ ನೀಡಿದ್ದಾರೆನ್ನುವುದನ್ನು ಅಲ್ಲಗಳೆದಿದ್ದಾರೆ.‘ ವಾಜಪೇಯಿ ಹಾಗೆ ಹೇಳಿದ್ದರು ಎಂದು ನಾನೆಂದೂ ಕೇಳಿಲ್ಲ. ಅಲ್ಲದೆ ಅಟಲ್‌ ಈ ರೀತಿ ಭಾಷೆಯನ್ನೇ ಬಳಸುತ್ತಿರಲಿಲ್ಲ. ಪಾರ್ಲಿಮೆಂಟಿನಲ್ಲಿ ಅವರ ಚರ್ಚೆಯು ಎಂದಿಗೂ ಸ್ವಾರಸ್ಯಕರವಾಗಿರುತ್ತಿತ್ತು. ಅವರು ಎಂದಿಗೂ ವೈಯಕ್ತಿಕವಾಗಿ ದಾಳಿ ಮಾಡುತ್ತಿರಲಿಲ್ಲ’ ಎಂದಿದ್ದಾರೆ.

ಅಲ್ಲದೆ ಇದೇ ರೀತಿಯ ಹೇಳಿಕೆ ಹಲವಾರು ಜಾಗತಿಕ ಜನರ ಹೆಸರಿನಲ್ಲಿಯೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ಬ್ರಿಟನ್‌ನ ಮಾಜಿ ಪ್ರಧಾನಿ ಬಂಜಮಿನ್‌ ವಿರೋಧ ಪಕ್ಷಗಳ ಅರ್ಧ ಜನ ಸದಸ್ಯರು ಮೂರ್ಖರು’ ಎಮದು ಹೇಳಿದ್ದಾರೆಂಬ ಹೇಳಿಕೆ ಹರಿದಾಡಿತ್ತು. ಇದೂ ಕೂಡ ಅಂಥದ್ದೇ ಸುಳ್ಳು ಹೇಳಿಕೆ.