"ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಎಂ ಪರಮಾಧಿಕಾರದ ಜೊತೆಗೆ ವಿವೇಚನೆಯನ್ನೂ ಬಳಸಬೇಕಿತ್ತು. ಈ ಬಗ್ಗೆ ನನ್ನ ಕ್ಷೇತ್ರದ ಜನರಲ್ಲಿ ಅಸಮಾಧಾನ ಇದೆ. ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧಿಸಲು ರಾಜೀನಾಮೆ ಕೊಡುತ್ತಿದ್ದೇನೆ."
ಬೆಂಗಳೂರು(ಅ. 17): ನಂಜನಗೂಡಿನ ಕಾಂಗ್ರೆಸ್ ಮುಖಂಡ ವಿ.ಶ್ರೀನಿವಾಸಪ್ರಸಾದ್ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಲವು ದಿನಗಳಿಂದ ಬಹಿರಂಗವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಶ್ರೀನಿವಾಸಪ್ರಸಾದ್ ರಾಜೀನಾಮೆಯು ಅನಿರೀಕ್ಷಿತವೇನಲ್ಲ. ಇಂದು ರಾಜೀನಾಮೆ ಸಲ್ಲಿಸುವಾಗ ಶ್ರೀನಿವಾಸಪ್ರಸಾದ್ ಹಾಗೂ ಸ್ಪೀಕರ್ ಕೋಳಿವಾಡ ನಡುವೆ ನಡೆದ ಸಂಭಾಷಣೆ ಬಹಳ ಕುತೂಹಲ ಮೂಡಿಸಿತು. ಅದರ ವಿವರ ಈ ಕೆಳಕಂಡಂತಿದೆ.
ಸ್ಪೀಕರ್ ಕೇಳಿದ್ದು.. ಶ್ರೀನಿವಾಸ್ ಪ್ರಸಾದ್ ಹೇಳಿದ್ದು..
ಸ್ಪೀಕರ್: ನೀವು ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದೀರಾ.?
ಶ್ರೀನಿವಾಸ್ ಪ್ರಸಾದ್ : ಹೌದು
ಸ್ಪೀಕರ್ : ನಿಮ್ಮ ರಾಜಿನಾಮೆಗೆ ಯಾರದ್ದಾದರೂ ಒತ್ತಡ ಇದೆಯಾ..?
ಶ್ರೀನಿವಾಸ್ ಪ್ರಸಾದ್ : ಇಲ್ಲ
ಸ್ಪೀಕರ್ : ನೀವು ನಿಮ್ಮ ಕ್ಷೇತ್ರದ ಜನರು ಮತ್ತು ಚುನಾವಣೆ ಸಂದರ್ಭದಲ್ಲಿ ಸೂಚಕರಾಗಿದ್ದವರಿಗೆ ತಿಳಿಸಿದ್ದೀರಾ..?
ಶ್ರೀನಿವಾಸ್ ಪ್ರಸಾದ್ : ಸುದೀರ್ಘವಾಗಿ ಚರ್ಚಿಸಿದ್ದೇನೆ.
ಸ್ಪೀಕರ್ : ನಿಮ್ಮ ಬಳಿ ಚರ್ಚಿಸಿರುವ ಯಾವುದಾದರೂ ದಾಖಲೆ ಇದೆಯಾ..?
ಶ್ರೀನಿವಾಸ್ ಪ್ರಸಾದ್ : ಮೌಖಿಕ ಚರ್ಚೆ ಮಾಡಿದ್ದೇನೆ
ಸ್ಪೀಕರ್ : ನಿಮ್ಮ ರಾಜಿನಾಮೆಯಿಂದ ಮತ್ತೊಂದು ಚುನಾವಣೆ ಬರುತ್ತದೆ. ಸಾರ್ವಜನಿಕರ ಹಣ ಪೋಲಾಗುತ್ತದೆ. ಈ ಬಗ್ಗೆ ಯೋಚನೆ ಮಾಡಿದ್ದೀರಾ.?
ಶ್ರೀನಿವಾಸ್ ಪ್ರಸಾದ್ : ಹೌದು, ಈ ಬಗ್ಗೆ ನನ್ನ ಮತದಾರರ ಜೊತೆ ಮಾತನಾಡಿದ್ದೇನೆ. ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ
ಸ್ಪೀಕರ್ : ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಬೇಸರಗೊಂಡು ರಾಜಿನಾಮೆ ಕೊಡುತ್ತಿದ್ದೀರಾ..?
ಶ್ರೀನಿವಾಸ್ ಪ್ರಸಾದ್ : ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಎಂ ಪರಮಾಧಿಕಾರದ ಜೊತೆಗೆ ವಿವೇಚನೆಯನ್ನೂ ಬಳಸಬೇಕಿತ್ತು. ಈ ಬಗ್ಗೆ ನನ್ನ ಕ್ಷೇತ್ರದ ಜನರಲ್ಲಿ ಅಸಮಾಧಾನ ಇದೆ. ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧಿಸಲು ರಾಜೀನಾಮೆ ಕೊಡುತ್ತಿದ್ದೇನೆ.
ಸ್ಪಿಕರ್: ರಾಜೀನಾಮೆ ವಾಪಸ್ ಪಡೆಯುತ್ತೀರಾ..?
ಶ್ರೀನಿವಾಸ್ ಪ್ರಸಾದ್ : ಇಲ್ಲ. ದಯವಿಟ್ಟು ರಾಜೀನಾಮೆ ಅಂಗೀಕರಿಸಿ.
