ಧರ್ಮಸ್ಥಳ ಪ್ರಕರಣದ ವರದಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹರ್ಷೇಂದ್ರ ಕುಮಾರ್ ಮೇಲೆ ಎಸ್ಐಟಿ ದಾಳಿ ಎಂಬ ಸುಳ್ಳು ಸುದ್ದಿ ವೈರಲ್ ಆಗಿದ್ದು, ಇದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯತ್ನ.

ಬೆಂಗಳೂರು (ಆ.26): ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣ, ಸುಜಾತಾ ಭಟ್‌ ಸುಳ್ಳುಗಳು ಹಾಗೂ ಧರ್ಮಸ್ಥಳ ದೇವಸ್ಥಾನದ ಮೇಲೆ ಅಪಪ್ರಚಾರ ಮಾಡಲು ನಿಂತ ಗ್ಯಾಂಗ್‌ಗಳ ವಿರುದ್ಧ ನೇರ...ದಿಟ್ಟ..ನಿರಂತರವಾಗಿ ನಿಂತಿದ್ದು ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಈ ವಿಚಾರದಲ್ಲಿ ಅತ್ಯಂತ ನಿಷ್ಪಕ್ಷಪಾತ ವರದಿಗೆ ಇಳಿದಿದ್ದ ಏಷ್ಯಾನೆಟ್‌ ಸುವರ್ಣನ್ಯೂಸ್‌ ಟೀಮ್‌, ಇಡೀ ಧರ್ಮಸ್ಥಳ ವಿರೋಧಿ ಗ್ಯಾಂಗ್‌ ಇಲ್ಲಿಯವರೆಗೂ ಜನರಿಗೆ ಹೇಳಿದ್ದ ಸುಳ್ಳನ್ನು ಬಟಾಬಯಲು ಮಾಡಿತ್ತು. ಇದರ ಬೆನ್ನಲ್ಲಿಯೇ ಏಷ್ಯಾನೆಟ್‌ ಸುವರ್ಣನ್ಯೂಸ್ ಹೆಸರಲ್ಲಿ ಫೇಕ್‌ ಪೋಸ್ಟ್‌ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ವೈರಲ್‌ ಆಗುತ್ತಿದೆ.

ಅದರೊಂದಿಗೆ ಈ ಸುಳ್ಳು ಸುದ್ದಿಯ ಪೋಸ್ಟ್‌ಗಳು ವಾಟ್ಸಾಪ್‌ ಮೂಲಕವೂ ಹರಿದಾಡುತ್ತಿದ್ದು, ಇದರಲ್ಲಿರುವ ಮಾಹಿತಿ ಸಂಪೂರ್ಣವಾಗಿ ಸುಳ್ಳು ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತಿಳಿಸಲು ಬಯಸುತ್ತದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಎನ್ನುವ ವಾಟ್ಸಾಪ್‌ ಗ್ರೂಪ್‌ನಲ್ಲಿ ಇಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಲೋಗೋ ಹೊಂದಿರುವ ಪೋಸ್ಟ್‌ನಲ್ಲಿ 'ಹರ್ಷೇಂದ್ರ ಕುಮಾರ್‌ಗೆ ಎಸ್‌ಐಟಿ ಶಾಕ್‌, ಸರ್ಚ್‌ ವಾರಂಟ್‌ ಜೊತೆ ಬಂದ ಅಧಿಕಾರಿಗಳು' ಎದು ಬರೆಯಲಾಗಿದೆ. ಆಗಸ್ಟ್‌ 26 ರಂದು ಅಂದಾಜು 3 ಗಂಟೆಯ ಹಿಂದೆ ಪೋಸ್ಟ್‌ ಮಾಡಲಾದ ಸುದ್ದಿ ಎನ್ನುವ ಮಾಹಿತಿಯೂ ಪೋಸ್ಟ್‌ನಲ್ಲಿದೆ.

ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಈ ಸುದ್ದಿ ಸಂಪೂರ್ಣ ಫೇಕ್‌. ಇದು ಇಂದು ಬೆಳಗ್ಗೆ ಮಹೇಶ್‌ ಶೆಟ್ಟಿ ತಿಮರೋಡಿ ವಿಚಾರದಲ್ಲಿ ನಾವೇ ಮಾಡಿದ ಪೋಸ್ಟ್‌ಅನ್ನು ತಿರುಚಿ ಸೃಷ್ಟಿಸಲಾಗಿದೆ.

ಇಂದು ಬೆಳಗ್ಗೆ ಮಾಡಿದ್ದ ಪೋಸ್ಟ್‌ನಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿಗೆ ಎಸ್ಐಟಿ ಶಾಕ್‌, ಸರ್ಚ್‌ ವಾರಂಟ್‌ ಪಡೆದು ನಿವಾಸದ ಮೇಲೆ ದಾಳಿ..' ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು. ಇದೇ ಪೋಸ್ಟ್‌ಅನ್ನು ಕಾಪಿ ಮಾಡಿರುವ ಫೇಕ್‌ ನ್ಯೂಸ್‌ ಸೃಷ್ಟಿಕರ್ತರು, ಇದಕ್ಕೆ ಹರ್ಷೇಂದ್ರ ಅವರ ಫೋಟೋವನ್ನು ಕೂರಿಸಿ, ಅವರ ಮೇಲೆ ಎಸ್‌ಐಟಿ ದಾಳಿ ಎನ್ನುವಂತೆ ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೊಂಡಿದೆ. ಅದಲ್ಲದೆ, ಏಷ್ಯಾನೆಟ್‌ ಸುವರ್ಣನ್ಯೂಸ್‌ ಬಳಸುವ ಫಾಂಟ್‌ ಕೂಡ ಇದಲ್ಲ.

ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಈ ಪೋಸ್ಟಿನ ಹಿಂದಿದೆ. ಸುವರ್ಣ ನ್ಯೂಸ್ ಸುದ್ದಿಯನ್ನು ತಮಗೆ ಬೇಕಾದಂತೆ ಸುಳ್ಳಾಗಿ ತಿರುಚಲಾಗಿದೆ. ಹಾಗಾಗಿ ಪೊಲೀಸರು ಇವರ ಮೇಲೆ ಕೂಡಲೇ ಸ್ವಯಂ ಪ್ರೇರಿತ ದೂರನ್ನು ದಾಖಲಿಸಬೇಕು ಎನ್ನುವುದು ಸುದ್ದಿಸಂಸ್ಥೆಯ ಆಗ್ರಹ ಕೂಡ.

ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಸುದ್ದಿಯ ವಿಚಾರದಲ್ಲಿ ಹಾಗೂ ಸುದ್ದಿವಾಹಿನಿ ಮತ್ತು ವೆಬ್‌ಸೈಟ್‌ನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನ ಮಾಡುವವರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ.