Asianet Suvarna News Asianet Suvarna News

ಲೋಕಸಭೆ ಚುನಾವಣೆಗೆ ದೇವೇಗೌಡ ರಣತಂತ್ರ : ಫಲಿಸುತ್ತಾ ಮಾಸ್ಟರ್ ಪ್ಲಾನ್ ..?

ರಾಜ್ಯ ವಿಧಾನಸಭೆಯಲ್ಲಿ ಬಹುಮತ ಪಡೆದರೂ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಬಳಿಕ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮುಂದಿನ ಲೋಕಸಭೆಗೆ ರಣತಂತ್ರ ಹೆಣೆಯಲು ಸನ್ನದ್ಧರಾಗಿದ್ದಾರೆ.

Deve Gowda's Master Plan For Lok Sabha Elections

ಬೆಂಗಳೂರು :  ರಾಜ್ಯ ವಿಧಾನಸಭೆಯಲ್ಲಿ ಬಹುಮತ ಪಡೆದರೂ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಬಳಿಕ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮುಂದಿನ ಲೋಕಸಭೆಗೆ ರಣತಂತ್ರ ಹೆಣೆಯಲು ಸನ್ನದ್ಧರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ದೂರ ಇಡಲು ರಾಜ್ಯದಲ್ಲಿ ಕಾಂಗ್ರೆಸ್‌ ಜತೆಗೆ ಒಟ್ಟಾಗಿ ಹೋಗಲು ಯೋಜನೆ ರೂಪಿಸುವತ್ತ ರಾಜಕೀಯ ಲೆಕ್ಕಾಚಾರ ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಹುರಿದುಂಬಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅಭ್ಯರ್ಥಿಗಳ ಜತೆ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಆತ್ಮಾವಲೋಕನ ಸಭೆ ನಡೆಸಿದ ಗೌಡರು ಸಭೆಯಲ್ಲಿ ಸೋಲಿಗೆ ಕಾರಣಗಳಿಗೇನು ಎಂಬ ವಿಮರ್ಶೆಗಳನ್ನು ಮಾಡುವುದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಜತೆಗೂಡಿ ಎದುರಿಸುವ ಬಗ್ಗೆ ಗಂಭೀರವಾಗಿ ಚರ್ಚಿಸಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಹೇಗೆ ತಡೆಗಟ್ಟಬೇಕು ಎಂಬುದರ ಕುರಿತು ಯೋಜನೆ ರೂಪಿಸಬೇಕಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಎಷ್ಟುಸ್ಥಾನ ಲಭಿಸಲಿದೆ ಎನ್ನುವುದಕ್ಕಿಂತ ಕಾಂಗ್ರೆಸ್‌ ಜತೆ ಕೈ ಜೋಡಿಸಿ ಬಿಜೆಪಿಗೆ ಯಾವ ರೀತಿಯಲ್ಲಿ ಹಿನ್ನಡೆ ಉಂಟು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಬೇಕಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು. ಬಿಜೆಪಿಯನ್ನು ಮಣಿಸುವ ಕುರಿತು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಬೇಕು ಎಂದು ಎನ್ನುವ ಮೂಲಕ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದರು.

ವಿಧನಾಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದಿರುವುದು ನಿರಾಸೆ ಮೂಡಿಸಿದೆ. ಜೆಡಿಎಸ್‌ ಸೀಟಿನ ಲೆಕ್ಕಾಚಾರ ಒಂದು ಕಡೆಯಾದರೆ, ಕಳೆದ ಚುನಾವಣೆಗಿಂತ ಪಕ್ಷದ ಶೇಕಡಾವಾರು ಮತಗಳು ಸಹ ಕುಸಿದಿವೆ. ಬಿಎಸ್‌ಪಿ ಜತೆ ಚುನಾವಣಾ ಮೈತ್ರಿ ಮಾಡಿಕೊಂಡರೂ ಪಕ್ಷಕ್ಕೆ 37 ಸ್ಥಾನಗಳು ಬಂದಿವೆ. ಯಾವ ಕಾರಣದಿಂದ ಸೋಲಾಗಿದೆ? ಎಲ್ಲಿ ಎಡವಿದ್ದೇವೆ? ಯಾವ ಜಿಲ್ಲೆಯಲ್ಲಿ ನಮ್ಮ ಸ್ಥಿತಿಗತಿ ಹೇಗಿದೆ? ಸೇರಿದಂತೆ ಹಲವು ವಿಷಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದು ಹೇಳಿದರು.

ಚಿಕಿತ್ಸೆಗೂ ಹೋಗಲ್ಲ:  ಮುಂದಿನ ಲೋಕಸಭಾ ಚುನಾವಣೆಯಲ್ಲಾದರೂ ಹೆಚ್ಚು ಸ್ಥಾನ ಪಡೆದುಕೊಳ್ಳಲು ಪಕ್ಷವನ್ನು ಸಂಘಟಿಸಬೇಕಾಗಿದೆ. ವಿಧಾನಸಭಾ ಚುನಾವಣೆ ಬಳಿಕ ಒಂದಷ್ಟುದಿನ ಆರೋಗ್ಯ ಸುಧಾರಿಸಿಕೊಳ್ಳಲು ನೈಸರ್ಗಿಕ ಚಿಕಿತ್ಸೆಗಾಗಿ ಹೋಗಲು ತೀರ್ಮಾನಿಸಿದ್ದೆ. ಆದರೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಪರಿಸ್ಥಿತಿಯು ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಿದೆ ಎಂದು ಹೇಳುವ ಮೂಲಕ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಮಾತುಗಳು ನಿತ್ಯ ಕೇಳಿ ಬರುತ್ತಿವೆ. ಆದರೆ ಇದು ಆಗದ ಮಾತು. ಸರ್ಕಾರ ರಚನೆಯಾಗಿ ಮಂತ್ರಿ ಮಂಡಲ ಸಹ ಆಸ್ತಿತ್ವಕ್ಕೆ ಬಂದಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಈ ಹಿಂದೆ ನಡೆದ ಘರ್ಷಣೆಯನ್ನು ಈಗ ಹೊಂದಿಸಿಕೊಂಡು ಹೋಗಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.

Follow Us:
Download App:
  • android
  • ios