199 ಕ್ಯಾಂಟೀನ್ ಹಾಗೂ 28 ಅಡುಗೆ ಮನೆಯ ಮೇಲುಸ್ತುವಾರಿ ನೋಡಿಕೊಳ್ಳಲು ಉನ್ನತ ಅಧಿಕಾರದ ಸಮಿತಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದಲ್ಲಿ ಉನ್ನತ ಅಧಿಕಾರ ಸಮಿತಿ ರಚನೆ ಮಾಡಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಸಮಿತಿ ಸದಸ್ಯರಾಗಿರುತ್ತಾರೆ.

ಪ್ರತಿ ಕ್ಯಾಂಟೀನ್‌ನಲ್ಲೂ 2 ಶೌಚಾಲಯ, ಸಿಸಿಟೀವಿ | ಒಂದು ಬಾರಿಗೆ 70-80 ಮಂದಿಗೆ ಸ್ಥಳಾವಕಾಶ | ಬಿಬಿಎಂಪಿ ಕಚೇರಿಯಲ್ಲಿ 1 ಹೆಚ್ಚುವರಿ ಕ್ಯಾಂಟೀನ್‌

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಇಂದಿರಾ ಕ್ಯಾಂಟೀನ್‌' ನಿರ್ಮಾಣ ತಂತ್ರಜ್ಞಾನ, ವಿನ್ಯಾಸ, ಲೋಗೋ ಸೇರಿದಂತೆ ಎಲ್ಲಾ ರೂಪುರೇಷೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಅನುಮೋದನೆ ನೀಡಿದ್ದು, ಜೂನ್‌ 1ರಿಂದಲೇ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

ನಗರದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡಲು ಬಿಬಿಎಂಪಿಯ 198 ವಾರ್ಡ್‌ ಗಳಲ್ಲೂ ತಲಾ ಒಂದು ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 1 ಸೇರಿ 199 ಕ್ಯಾಂಟೀನ್‌ ನಿರ್ಮಾಣ ಮಾಡುತ್ತಿದೆ. 

ಈ ಕ್ಯಾಂಟೀನ್‌'ಗಳ ಏಕ ರೂಪದ ವಿನ್ಯಾಸ, ಲೋಗೋ ಅಂತಿಮಗೊಳಿಸಿರುವ ಸಿದ್ದರಾಮಯ್ಯ, ಪ್ರಿಕಾಸ್ಟ್‌ ತಂತ್ರಜ್ಞಾನದಲ್ಲಿ ಕ್ಯಾಂಟೀನ್‌ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದಾರೆ. ಪ್ರತಿ ಕ್ಯಾಂಟೀನ್‌ 860 ಚದರಡಿ ವಿಸ್ತೀರ್ಣ ಇರುವಂತೆ ಜುಲೈ 15ರೊಳಗಾಗಿ ಕ್ಯಾಂಟೀನ್‌ ನಿರ್ಮಾಣ ಪೂರ್ಣಗೊಳಿಸಬೇಕು. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಅಡುಗೆ ಮನೆ ನಿರ್ಮಾಣ ಮಾಡಬೇಕು. ಅಡುಗೆ ಮನೆಯಿಂದ ಆಯಾ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಿಗೆ ಬರುವ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಬೇಕು. ಈ ಅಡುಗೆ ಮನೆಗಳು ಆಗಸ್ಟ್‌ 1ರ ವೇಳೆಗೆ ಕಾರ್ಯ ನಿರ್ವಹಣೆಗೆ ಸಿದ್ಧವಾಗಿರಬೇಕು. ಒಟ್ಟಾರೆ ಯೋಜನೆಗೆ ಆಗಸ್ಟ್‌ 15ರ ವೇಳೆಗೆ ಚಾಲನೆ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದಿರಾ ಕ್ಯಾಂಟಿನ್‌ ಅನುಷ್ಠಾನದ ಕುರಿತು ಶುಕ್ರವಾರ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮಾದರಿಯಲ್ಲಿ ಕ್ಯಾಂಟೀನ್‌ ನಿರ್ಮಾಣ ಮಾಡಿದರೆ ನಿಗದಿತ ವೇಳೆಗೆ ಪೂರ್ಣವಾಗುವುದಿಲ್ಲ. ಹೀಗಾಗಿ ಪ್ರಿಕಾಸ್ಟ್‌ ಕನ್‌'ಸ್ಟ್ರಕ್ಷನ್‌ ತಂತ್ರಜ್ಞಾನ ಬಳಸಿ ಬೇರೆಡೆ ಅಗತ್ಯ ನಿರ್ಮಾಣ ಸಾಮಗ್ರಿ ಸಿದ್ಧಪಡಿಸಿ ಜೋಡಿಸಬೇಕಾಗುತ್ತದೆ. ಇದು 60 ವರ್ಷ ಬಾಳಿಕೆ ಬರಲಿದ್ದು, ಮಿಷನ್‌'ನಿಂದ ಫಿನಿಶಿಂಗ್‌ ನೀಡುವುದರಿಂದ ಸುಂದರವಾಗಿ ಕಾಣುತ್ತದೆ ಎಂದು ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರು. ಇದೇ ವೇಳೆ ತಮಿಳುನಾಡು ಮೂಲದ ಕೆಇಎಫ್‌ ಇನ್‌'ಫ್ರಾ ಕಂಪನಿಯು ಪ್ರತಿ ಕ್ಯಾಂಟೀನ್‌'ಗೆ 32 ಲಕ್ಷ ವೆಚ್ಚದಂತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿರುವುದನ್ನು ಗಮನಕ್ಕೆ ತರಲಾಯಿತು. ಈ ವಿನ್ಯಾಸವನ್ನು ಮುಖ್ಯಮಂತ್ರಿಗಳು ಒಪ್ಪಿದ್ದು, ಮೇ 30ರ ವೇಳೆಗೆ ಟೆಂಡರ್‌ ಅಂತಿಮಗೊಳ್ಳುವ ಸಾಧ್ಯತೆ ಇದೆ. ಜುಲೈ 15ರ ವೇಳೆಗೆ ಕ್ಯಾಂಟೀನ್‌ ಸಿದ್ಧಗೊಳ್ಳಲಿದ್ದು ಆಗಸ್ಟ್‌ 1ರ ವೇಳೆಗೆ ಅಡುಗೆ ಮನೆ ಸೇರಿದಂತೆ ಎಲ್ಲವೂ ಸಿದ್ಧವಾಗಲಿದೆ. ಆಗಸ್ಟ್‌ 15ರಿಂದ ಕಾರ್ಯನಿರ್ವಹಿಸಲು ಸಜ್ಜಾಗಲಿವೆ ಎಂದು ಮೇಯರ್‌ ಜಿ. ಪದ್ಮಾವತಿ ಹೇಳಿದ್ದಾರೆ.

28 ಅಡುಗೆ ಮನೆ ನಿರ್ಮಾಣ: ಬಿಬಿಎಂಪಿ ವ್ಯಾಪ್ತಿಯ 199 ಕ್ಯಾಂಟೀನ್'ಗಳಿಗೆ ಆಹಾರ ಪೂರೈಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಅಡುಗೆ ಮನೆ ನಿರ್ಮಾಣ ಮಾಡಲಾಗುವುದು. ಅಡುಗೆ ಮನೆಗೆ ಅಗತ್ಯ ಸಲಕರಣೆ ಹಾಗೂ ಯಂತ್ರಗಳನ್ನು ಬಿಬಿಎಂಪಿಯೇ ಸ್ವಂತ ವೆಚ್ಚದಲ್ಲಿ ಅಳವಡಿಕೆ ಮಾಡುತ್ತದೆ. ಗುಣಮಟ್ಟ ಹಾಗೂ ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಇರಲು ಈ ಕ್ರಮ ಅನುಸರಿಸಲಾಗುತ್ತಿದೆ. ನಿರ್ವಹಣೆ ಮಾಡುವವರು ಯಾವುದೇ ಲೋಪ ತೋರಿದರೂ ನಿರ್ದಾಕ್ಷಿಣ್ಯವಾಗಿ ನಿರ್ವಹಣೆಗೆ ನೀಡಿದ್ದ ಟೆಂಡರ್ ರದ್ದುಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಕ್ಯಾಂಟೀನ್ ನಿರ್ವಹಣೆ ಹಾಗೂ ಅಡುಗೆ ಸಿದ್ಧಪಡಿಸಲು ಸ್ವಯಂಸೇವಕ ಸಂಘ, ಸ್ತ್ರೀ ಶಕ್ತಿ ಸಂಘ ಹಾಗೂ ಸರ್ಕಾರೇತರ ಸಂಘಗಳಿಂದ ಟೆಂಡರ್ ಆಹ್ವಾನಿಸಲಾಗುವುದು. ಕನಿಷ್ಠ 33ರಷ್ಟು ಕ್ಯಾಂಟೀನ್ ಹಾಗೂ ಅದರ ಅಡುಗೆ ಮನೆಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ವಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಮೇಯರ್ ಹೇಳಿದ್ದಾರೆ.

ಉನ್ನತ ಅಧಿಕಾರ ಸಮಿತಿ: 199 ಕ್ಯಾಂಟೀನ್ ಹಾಗೂ 28 ಅಡುಗೆ ಮನೆಯ ಮೇಲುಸ್ತುವಾರಿ ನೋಡಿಕೊಳ್ಳಲು ಉನ್ನತ ಅಧಿಕಾರದ ಸಮಿತಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದಲ್ಲಿ ಉನ್ನತ ಅಧಿಕಾರ ಸಮಿತಿ ರಚನೆ ಮಾಡಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಸಮಿತಿ ಸದಸ್ಯರಾಗಿರುತ್ತಾರೆ.

ಮೆನು ಹೀಗಿದೆ:
ಬೆಳಗಿನ ಉಪಾಹಾರ: ಇಡ್ಲಿ ಸಾಂಬಾರ್‌, ರೈಸ್‌ ಬಾತ್‌, ಅವಲಕ್ಕಿ ಉಪ್ಪಿಟ್ಟು, ಖಾರಾ ಉಪ್ಪಿಟ್ಟು, ಇಡ್ಲಿ ಸಾಂಬಾರ್‌, ಚಿತ್ರಾನ್ನ, ಖಾರಾ ಪೊಂಗಲ್‌ (ಪ್ರತಿ ದಿನ ಇವುಗಳಲ್ಲಿ ಒಂದು)
ಮಧ್ಯಾಹ್ನದ ಊಟ: ಅನ್ನ, ಸಾರು, ಉಪ್ಪಿನಕಾಯಿ, ಹಪ್ಪಳ
ರಾತ್ರಿ ಭೋಜನ: ಅನ್ನ ಸಾಂಬಾರು, ಉಪ್ಪಿನ ಕಾಯಿ, ಹಪ್ಪಳ
ಭಾನುವಾರ: ಬಿಸಿ ಬೇಳೆ ಬಾತ್‌, ತರಕಾರಿ ಅನ್ನ, ಪುಳಿಯೋಗರೆ, ಜೀರಿಗೆ ಅನ್ನ (ಪ್ರತಿ ಭಾನುವಾರ ಇವುಗಳಲ್ಲಿ ಒಂದು)

ಕ್ಯಾಂಟೀನ್‌ ಹೀಗಿರುತ್ತೆ:
* ಪ್ರತಿ ಕ್ಯಾಂಟೀನ್ ವಿಸ್ತೀರ್ಣ 860 ಚದರ ಅಡಿಗಳು
* ಒಂದು ಕ್ಯಾಂಟೀನ್ ನಿರ್ಮಾಣಕ್ಕೆ ಅಂದಾಜು 32 ಲಕ್ಷ ವೆಚ್ಚ
* ಪ್ರತಿ ಕ್ಯಾಂಟೀನ್'ನಲ್ಲೂ 2 ಶೌಚಾಲಯ, ಸಿಸಿಟಿವಿ ವ್ಯವಸ್ಥೆ
* ಮೇ 30ಕ್ಕೆ ಟೆಂಡರ್ ಅಂತಿಮ, ಜೂನ್ 1ರಿಂದಲೇ ಕಾಮಗಾರಿ
* ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಒಂದು ಅಡುಗೆ ಮನೆ.

ಮೊದಲು ಬಂದ 250 ಮಂದಿಗೆ ಮಾತ್ರ ಊಟ:
ಪ್ರತಿ ಕ್ಯಾಂಟೀನ್‌'ನಲ್ಲೂ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಪ್ರತಿ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ ತಲಾ 250 ಕೂಪನ್‌ ಮಾತ್ರ ನೀಡಲಾಗುವುದು. ಸದ್ಯಕ್ಕೆ ಮೊದಲ 250 ಮಂದಿಗೆ ಮಾತ್ರ ಕೂಪನ್‌ ನೀಡಲು ನಿರ್ಧರಿಸಲಾಗಿದೆ ಎಂದು ಮೇಯರ್‌ ಜಿ. ಪದ್ಮಾವತಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in