ಅತ್ಯಾಚಾರ ಕೇಸಿನ ತೀರ್ಪು ತನಗೆ ವ್ಯತಿರಿಕ್ತವಾಗಿ ಬರಬಹುದು ಎಂಬುದನ್ನು ಅರಿತಿದ್ದ ಗುರ್ಮೀತ್, ಹಾಗೇನಾದರೂ ಆದಲ್ಲಿ ಹಿಂಸಾಚಾರ ನಡೆಸಲು  ನಿರ್ಧರಿಸಿದ್ದ. ಇದರ ಹೊಣೆಯನ್ನು ತನ್ನ ಹಲವು ಅನುಯಾಯಿಗಳಿಗೆ ವಹಿಸಿದ್ದ.

ಪಂಚಕುಲ(ಸೆ.08): ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್, ತನಗೆ ಶಿಕ್ಷೆಯಾದರೆ ದಂಗೆ ಏಳುವಂತೆ ಮಾಡಲು 5 ಕೋಟಿ ಖರ್ಚು ಮಾಡಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ಇದರೊಂದಿಗೆ ಗುರ್ಮೀತ್ ದೋಷಿ ಎಂದು ತೀರ್ಪು ಬಂದ ಬಳಿಕ 38 ಜನರನ್ನು ಬಲಿ ಪಡೆದ ಹಿಂಸಾಚಾರ ಪ್ರಕರಣ, ಡೇರಾ ಸಚ್ಚಾ ಸೌದಾ ಆಶ್ರಮ ಮತ್ತು ಅದರ ನಾಯಕರನ್ನು ಸುತ್ತಿಕೊಂಡಿದೆ.

ಅತ್ಯಾಚಾರ ಕೇಸಿನ ತೀರ್ಪು ತನಗೆ ವ್ಯತಿರಿಕ್ತವಾಗಿ ಬರಬಹುದು ಎಂಬುದನ್ನು ಅರಿತಿದ್ದ ಗುರ್ಮೀತ್, ಹಾಗೇನಾದರೂ ಆದಲ್ಲಿ ಹಿಂಸಾಚಾರ ನಡೆಸಲು ನಿರ್ಧರಿಸಿದ್ದ. ಇದರ ಹೊಣೆಯನ್ನು ತನ್ನ ಹಲವು ಅನುಯಾಯಿಗಳಿಗೆ ವಹಿಸಿದ್ದ. ಜೊತೆಗೆ ಹಿಂಸಾಚಾರ ನಡೆಸಲು ಹಣ ಹಂಚುವ ಕೆಲಸವನ್ನು ಪಂಚಕುಲದ ಡೇರಾ ಮುಖ್ಯಸ್ಥ ಚಮ್'ಕೌರ್ ಸಿಂಗ್ ಎಂಬಾತನಿಗೆ ವಹಿಸಿದ್ದ.

ಈ ಕುರಿತ ಮಾಹಿತಿ ಹಿಂಸಾಚಾರದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಿಕ್ಕಿದೆ. ಪಂಚಕುಲದ ಡೇರಾ ಮುಖ್ಯಸ್ಥ ಚಮ್'ಕೌರ್ ಸಿಂಗ್ ವಿರುದ್ಧ ಈಗಾಗಲೇ ದೇಶ ದ್ರೋಹ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗುತ್ತಿದಂತೆಯೇ ಈತ ಪರಾರಿಯಾಗಿದ್ದಾನೆ.

ಪಂಜಾಬ್'ನ ಅನೇಕ ಸ್ಥಳಗಳಿಗೆ ಹಣ ಕಳಿಸಿದ ಡೇರಾ, ಕೋರ್ಟ್ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಹಿಂಸೆ ಮಾಡುವಂತೆ ತನ್ನ ಅನುಯಾಯಿಗಳಿಗೆ ಪ್ರಚೋದಿಸಿತ್ತು. ಇದಲ್ಲದೆ, ಗಲಭೆ ವೇಳೆ ಸಾವು ಸಂಭವಿಸಿದರೆ ಕುಟುಂಬಗಳಿಗೆ ಭಾರಿ ಹಣ ನೀಡುವ ಆಮಿಷ ಒಡ್ಡಿ ಬ್ರೈನ್'ವಾಶ್ ಮಾಡುವ ಕೆಲಸ ಕೂಡ ಮಾಡಲಾಗಿತ್ತೆಂದು ವಿಚಾರಣೆಯಲ್ಲಿ ಗೊತ್ತಾಗಿದೆ. ಒಂದು ವೇಳೆ ಚಮ್'ಕೌರ್ ಸಿಂಗ್ ಬಂಧನವಾದರೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹರ್ಯಾಣಾ ಡಿಜಿಪಿ ಬಿ.ಎಸ್. ಸಂಧು ಹೇಳಿದ್ದಾರೆ.