ಬೆಂಗಳೂರು (ಆ. 14): ನೆರೆಯಿಂದ ಹಾನಿಗೊಳಗಾಗಿರುವ ಶಾಲೆಗಳ ವಿದ್ಯಾರ್ಥಿಗಳು ರಾಜ್ಯದ ಯಾವುದೇ ಶಾಲೆಗಳಿಗೆ ದಾಖಲಾತಿ ಕೋರಿ ಬಂದಲ್ಲಿ ಅಂತಹ ಮಕ್ಕಳನ್ನು ತಮ್ಮ ಶಾಲೆಗಳಲ್ಲಿ ಪ್ರವೇಶ ನೀಡುವಂತೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯು ಶಿಕ್ಷಕರಿಗೆ ಸೂಚನೆ ನೀಡಿದೆ.

ಸಲಾಂ ಸೈನಿಕರೇ: ಪ್ರವಾಹ ಇಳಿಕೆ, ರಕ್ಷಣಾ ಕಾರ್ಯ ಅಂತ್ಯ!

ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಗದಗ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ರಾಯಚೂರು ಸೇರಿದಂತೆ ಒಟ್ಟಾರೆ ಪ್ರವಾಹ ಉಂಟಾಗಿರುವ ೧೭ ಜಿಲ್ಲೆಗಳಲ್ಲಿ ಕೆಲವು ಶಾಲೆಗಳು ಮುಳುಗಡೆಯಾಗಿವೆ. ಅಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗ ಮುಂದುವರಿಸುವುದಕ್ಕಾಗಿ ಅತಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಶಿಕ್ಷಕರು, ಬಿಇಒ ಹಾಗೂ ಡಿಡಿಪಿಐಗಳಿಗೆ ತಿಳಿಸಿದೆ.

1 ವಾರದ ಮಳೆ 118 ವರ್ಷದ ದಾಖಲೆ, ಮೊದಲು ಅನಾವೃಷ್ಟಿ, ವಾರದಲ್ಲೇ ಅತಿವೃಷ್ಟಿ!

ಇಂತಹ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಾಗ ಜನನ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ ಅಥವಾ ಯಾವುದೇ ದಾಖಲೆಗಳನ್ನು ನೀಡುವಂತೆ ಒತ್ತಾಯಿಸದೆ ವಿದ್ಯಾರ್ಥಿಗಳು ಅಥವಾ ಪಾಲಕರಿಂದ ಸ್ವಯಂ ದೃಢೀಕೃತ
ಪತ್ರಗಳನ್ನು ಪಡೆದು ವಿದ್ಯಾರ್ಥಿಯು ಹಿಂದಿನ ಶಾಲೆಯಲ್ಲಿ ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೋ ಅದೇ ತರಗತಿಗಳಿಗೆ ಸೇರಿಸಿಕೊಳ್ಳುವಂತೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ
ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜನವಸತಿ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ, ದಾರಿಗಳು ಮಳೆಯಿಂದ ಹಾನಿಗೊಂಡು ಸಂಪರ್ಕ ಕಡಿತಗೊಂಡಿದ್ದಲ್ಲಿ ಅಂತಹ ಜನವಸತಿ ಪ್ರದೇಶಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು ಶಾಲೆಗೆ
ಕಡ್ಡಾಯವಾಗಿ ಹಾಜರಾಗುವಂತೆ ಒತ್ತಾಯಿಸದೆ ಸಂಪರ್ಕ ಕಲ್ಪಿಸುವವರೆಗೆ ರಜೆ ನೀಡುವಂತೆ ತಿಳಿಸಿದೆ.

ಪಠ್ಯಪುಸ್ತಕ ಪಟ್ಟಿ ಕೊಡಿ: ಹಾನಿಗೊಳಗಾಗಿರುವ ಪ್ರದೇಶದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಪೂರೈಸಲು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಕರ್ನಾಟಕ ಪಠ್ಯಪುಸ್ತಕ
ಸಂಘದ ವ್ಯವಸ್ಥಾಪಕರಿಗೆ ಬೇಡಿಕೆ ಸಲ್ಲಿಸಬೇಕು. ವ್ಯವಸ್ಥಾಪಕ ನಿರ್ದೇಶಕರು ಸ್ವೀಕೃತವಾದ ಬೇಡಿಕೆಗಳಿಗೆ ಅನುಸಾರವಾಗಿ ಉಚಿತವಾಗಿ ಪುಸ್ತಕಗಳನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ಶಾಲಾ ಕಟ್ಟಡಗಳ ದುರಸ್ತಿ: ಪ್ರವಾಹದಿಂದ ಹಾನಿಯಾಗಿರುವ ಶಾಲಾ ಕಟ್ಟಡಗಳ ಮರು ನಿರ್ಮಾಣ ಮತ್ತು ದುರಸ್ತಿಗೆ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸಂಬಂಧಪಟ್ಟ ಪ್ರಸ್ತಾವನೆಗಳನ್ನು ತುರ್ತಾಗಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೂ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.