Asianet Suvarna News Asianet Suvarna News

ದಂತ ವೈದ್ಯರೆಂದರೆ ನೋವು ಮಾಡುವವರಲ್ಲ, ನಗು ಅರಳಿಸುವವರು

ಕೇವಲ ತೊಂದರೆ ಕಾಣಿಸಿಕೊಂಡಾಗ ಮಾತ್ರ ದಂತವೈದ್ಯರ ಭೇಟಿ ಬದಲು ನಿಯಮಿತವಾಗಿ ಮಕ್ಕಳನ್ನು ಚೆಕ್‌ಅಪ್‌ಗೆ ಕರೆದುಕೊಂಡು ಹೋಗಬೇಕು. ಮಗುವಿಗೆ ಒಂದು ವರ್ಷವಾದಾಗ ಅಥವಾ ಬಾಯಿಯಲ್ಲಿ ಮೊದಲ ಹಲ್ಲು ಮೂಡಿದಾಗ ಮೊದಲ ಬಾರಿ ಬಾಯಿಯ ಪರೀಕ್ಷೆ ನಡೆಯಬೇಕು. ಇದರಿಂದಾಗಿ ಚಿಕ್ಕಂದಿನಲ್ಲಿಯೇ ಮಗುವಿಗೆ ಆ ವಾತಾವರಣ ಮತ್ತು ವೈದ್ಯರ ಪರಿಚಯವಿರುತ್ತದೆ.

Dentist specialist story

-ಡಾ. ಕೆ ಎಸ್ ಚೈತ್ರಾ (ಕನ್ನಡ ಪ್ರಭ)

ಹಲ್ಲುಗಳು ಮುಖದ ಸೌಂದರ್ಯದ ಪ್ರತಿನಿಧಿ. ಸ್ಪಷ್ಟಮಾತು, ಆಹಾರ ಅಗಿಯುವಿಕೆ, ದವಡೆಗಳ ಬೆಳವಣಿಗೆ- ಈ ಎಲ್ಲಾ ಕಾರ್ಯಗಳನ್ನು ಇವು ನಿರ್ವಹಿಸುತ್ತವೆ. ಈ ಹಲ್ಲುಗಳು- ವಸಡುಗಳನ್ನು ಸುಸ್ಥಿತಿಯಲ್ಲಿಡಲು, ಸರಿಯಾದ ಬೆಳವಣಿಗೆ ಆಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ದಂತವೈದ್ಯರ ಭೇಟಿ ಅವಶ್ಯಕ. ಆದರೆ, ಮಗುವಿನ ದೃಷ್ಟಿಯಿಂದ ಯೋಚಿಸಿದಾಗ ಅಪರಿಚಿತ ಜಾಗದಲ್ಲಿ ಕಂಡು- ಕೇಳರಿಯದ ವಸ್ತುಗಳನ್ನು ನೋಡುವುದು, ಬಿಳಿಕೋಟು ಧರಿಸಿ ಕೈ-ಬಾಯಿ ಕವಚ ಹಾಕಿದ ವ್ಯಕ್ತಿ ಬಾಯೊಳಗೆ ಏನನ್ನೋ ಮಾಡುವುದು, ತುಂಬಾ ನೋವಾಗುತ್ತದೆ ಎಂಬ ಸಂಶಯ, ಕುರ್ಚಿಯಿಂದ ಬಿದ್ದರೆ ಎಂಬ ಆತಂಕ, ಟಿವಿಯಲ್ಲಿ ನೋಡಿದ- ಇತರರಿಂದ ಕೇಳಿದ ಭಯಾನಕ ಚಿತ್ರಣ- ಇವೆಲ್ಲಾ ಮಗುವಿಗೆ ದಂತವೈದ್ಯರ ಬಗ್ಗೆ ಗಾಬರಿ ಮೂಡಿಸುವುದು ಸಹಜ. ಈ ಹೆದರಿಕೆ ಮಗುವನ್ನು ಅಗತ್ಯವಾದ ಚಿಕಿತ್ಸೆ ನಿರಾಕರಿಸಲು ಅಥವಾ ಹಠಮಾಡುವಂತೆ ಪ್ರಚೋದಿಸುತ್ತದೆ. ಹೀಗಾಗದಿರಲು ಪೋಷಕರು ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ಕೇವಲ ತೊಂದರೆ ಕಾಣಿಸಿಕೊಂಡಾಗ ಮಾತ್ರ ದಂತವೈದ್ಯರ ಭೇಟಿ ಬದಲು ನಿಯಮಿತವಾಗಿ ಮಕ್ಕಳನ್ನು ಚೆಕ್‌ಅಪ್‌ಗೆ ಕರೆದುಕೊಂಡು ಹೋಗಬೇಕು. ಮಗುವಿಗೆ ಒಂದು ವರ್ಷವಾದಾಗ ಅಥವಾ ಬಾಯಿಯಲ್ಲಿ ಮೊದಲ ಹಲ್ಲು ಮೂಡಿದಾಗ ಮೊದಲ ಬಾರಿ ಬಾಯಿಯ ಪರೀಕ್ಷೆ ನಡೆಯಬೇಕು. ಇದರಿಂದಾಗಿ ಚಿಕ್ಕಂದಿನಲ್ಲಿಯೇ ಮಗುವಿಗೆ ಆ ವಾತಾವರಣ ಮತ್ತು ವೈದ್ಯರ ಪರಿಚಯವಿರುತ್ತದೆ.

ಮನೆಯಲ್ಲಿ ಮಗು ಏನಾದರೂ ತಪ್ಪು ಮಾಡಿದಾಗ ಪೋಷಕರು ಹೆದರಿಸುವ ಮಾತು ‘ತಡಿ, ನಿಂಗೆ ಆ ಡಾಕ್ಟ್ರ ಹತ್ತಿರ ಎಳೆದುಕೊಂಡು ಹೋದ್ರೆ ಸೂಜಿಚುಚ್ಚಿ, ಎಲ್ಲಾ ಹಲ್ಲು ಕಿತ್ತುಕೊಡ್ತಾರೆ. ಆಗ ಬುದ್ಧಿ ಬರುತ್ತೆ’. ಮಗು ಒಳ್ಳೆಯ ನಡವಳಿಕೆ ಕಲಿಯಲಿ ಎಂಬುದು ಇದರ ಹಿಂದಿರುವ ಉದ್ದೇಶವಾದರೂ ದಂತವೈದ್ಯರ ಬಗ್ಗೆ ಮಗು ತನಗೆ ನೋವು ಮಾಡುವವರು ಎಂಬ ಅಭಿಪ್ರಾಯ ರೂಪಿಸಿಕೊಳ್ಳುತ್ತದೆ. ಇದು ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿ ಹೆದರಿಕೆ ಹುಟ್ಟುತ್ತದೆ. ಹಾಗಾಗಿ ಮಗುವಿನೊಂದಿಗೆ ಮಾತನಾಡುವಾಗ ನೋವು, ಕೀಳು, ಸೂಜಿ, ಇಕ್ಕಳ ಮುಂತಾದ ಶಬ್ದಗಳನ್ನು ಬಳಸಬಾರದು.

ಮಗುವಿಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಅನುಮಾನ ಪರಿಹರಿಸಲು ಪೋಷಕರು ದೊಡ್ಡ ಚಿತ್ರಗಳಿರುವ ಪುಸ್ತಕಗಳನ್ನು ಬಳಸಬಹುದು. ದಂತವೈದ್ಯರು ಬಳಸುವ ಬಾಯಿಕನ್ನಡಿ, ಲೈಟ್, ಕವಚಗಳು ಇವೆಲ್ಲದರ ಬಗ್ಗೆ ಮಗುವಿಗೆ ನೋಡಿ ತಿಳಿದಿದ್ದರೆ ಗಾಬರಿಯಾಗುವುದಿಲ್ಲ. ಬಾಯಿ ಪರೀಕ್ಷಿಸುವ ವೈದ್ಯರನ್ನು ಏನಾದರೂ ಕೊಳಕು ವಸ್ತು ಇದ್ದಲ್ಲಿ ತೆಗೆದುಹಾಕಿ ಗುಣಪಡಿಸುತ್ತಾರೆ ಎಂದು ಮಗುವಿಗೆ ಅರ್ಥವಾಗುವ ಹಾಗೆ ವಿವರಿಸಬಹುದು. ಅದರೊಂದಿಗೇ ಮನೆಯಲ್ಲಿ ದಂತವೈದ್ಯರು ಮಾಡುವ ಹಾಗೆ ಮಗುವನ್ನು ಅರ್ಧ ಮಲಗಿಸಿ ‘ಡಾಕ್ಟರ್- ಪೇಷೆಂಟ್’ ಆಟ ಆಡಿಸಿದರೆ ಮಗು ಆನಂದಿಸುತ್ತದೆ ಮತ್ತು ವೈದ್ಯರ ಭೇಟಿಗೆ ಸಿದ್ಧವಾಗುತ್ತದೆ.

ಅನೇಕ ಬಾರಿ ಪೋಷಕರು ಮಗುವಿನ ಎದುರು ದಂತಾರೋಗ್ಯಕ್ಕೆ ಸಂಬಂಧಿತ ತಮ್ಮ ಬಾಲ್ಯದಲ್ಲಿನ ಅಥವಾ ಹಳೆಯ ನೋವಿನ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ಹಾಗೆಯೇ ಇತರರಿಗಾದ ಕೆಟ್ಟ ಅನುಭವಗಳ ಚರ್ಚೆ ನಡೆಸುತ್ತಾರೆ. ಮಕ್ಕಳ ಎಳೆ ಮನಸಿನ ಮೇಲೆ ಇದು ಬೀರುವ ಪ್ರಭಾವ ಅಪಾರ. ಅದರ ಬದಲು ನೋವನ್ನು ಗುಣಪಡಿಸಿದ, ವಕ್ರಹಲ್ಲು ಸರಿಪಡಿಸಿದ ಅನುಭವ ಹಂಚಿಕೊಳ್ಳುವುದು ಉತ್ತಮ. ಮಗುವಿಗೆ ದಂತವೈದ್ಯರಲ್ಲಿ ವಿಶ್ವಾಸ ಇದ್ದಾಗ ಚಿಕಿತ್ಸೆ ನೀಡುವುದು ಸುಲಭ.

ಅನೇಕ ಬಾರಿ ಮಗುವನ್ನು ದಂತವೈದ್ಯರ ಬಳಿ ಹೇಗಾದರೂ ಮಾಡಿ ಕರೆದೊಯ್ಯಲು ಪೋಷಕರು ನಾನಾ ರೀತಿ ಆಮಿಷ ಒಡ್ಡುತ್ತಾರೆ. ‘ನೀನು ಅಲ್ಲಿಗೆ ಹೋದಾಗ ಅಳದಿದ್ದರೆ ನಿನಗೆ ಚಾಕ್ಲೆಟ್ ಕೊಡಿಸುತ್ತೇನೆ.’ ಕೂಡಲೇ ಮಗು ಅಲ್ಲಿಗೆ ಹೋದಾಗ ತನಗೆ ನೋವಾಗುವಂಥದ್ದು ಏನೋ ಮಾಡಲಾಗುತ್ತದೆ ಎಂದು ಭಾವಿಸುತ್ತದೆ. ಅದೂ ಅಲ್ಲದೇ ದಂತವೈದ್ಯರು ಆದಷ್ಟೂ ಕಡಿಮೆ ಸಿಹಿ ತಿಂಡಿಯ ಬಳಕೆ ಬಗ್ಗೆ ವಿವರಿಸುವಾಗ ಪೋಷಕರಿಂದ ಈ ರೀತಿಯ ವರ್ತನೆ ಮಗುವಿಗೆ ಗೊಂದಲ ಉಂಟುಮಾಡುತ್ತದೆ. ಇದರ ಬದಲಿಗೆ ಮಗುವಿಗೆ ವೈದ್ಯರ ಭೇಟಿಯ ನಂತರ ಒಳ್ಳೆಯ ನಡತೆಗಾಗಿ, ಧೈರ್ಯವಾಗಿ ಕುಳಿತಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಬೇಕು. ಸಣ್ಣ ಆಟಿಕೆ, ಕತೆಪುಸ್ತಕ ಏನನ್ನಾದರೂ ಕೊಟ್ಟು ಪ್ರೋತ್ಸಾಹಿಸಬಹುದು.

ಮಗು, ಚಿಕಿತ್ಸೆ ಪಡೆಯುವಾಗ ಸ್ವಲ್ಪಮಟ್ಟಿಗೆ ಅಳು- ಗಲಾಟೆ- ಕೊಸರಾಟ ನಿರೀಕ್ಷಿತ. ಅದನ್ನು ನಿಭಾಯಿಸಲು ದಂತವೈದ್ಯರು ಹಾಗೂ ಸಿಬ್ಬಂದಿ ತರಬೇತಿ ಪಡೆದಿರುತ್ತಾರೆ. ಪೋಷಕರು ಇದನ್ನರಿತು ಅವರ ಸಲಹೆಯಂತೆ ಹೊರಗೆ ಕಾಯುವುದು ಅಥವಾ ಹತ್ತಿರವಿರುವುದು ಒಳ್ಳೆಯದು. ಪೋಷಕರು ತಾವೇ ತೀರಾ ಗಾಬರಿಯಾದರೆ ಮಗುವಿನ ಅಳು- ಹಠ ಇನ್ನಷ್ಟು ಹೆಚ್ಚುತ್ತದೆ.

ಮಗುವಿಗೆ ದಂತವೈದ್ಯರ ಭೇಟಿ ತನ್ನ ಆರೋಗ್ಯ ಕಾಪಾಡಲು- ಚೆಂದಕಾಣಲು ಅವಶ್ಯಕ ಎಂಬುದನ್ನು ಮನದಟ್ಟು ಮಾಡಿಸುವುದು ಪೋಷಕರ ಜವಾಬ್ದಾರಿ. ಹಾಗೆಯೇ ಅದರಲ್ಲಿ ಆಯ್ಕೆಯ ಪ್ರಶ್ನೆಯಿಲ್ಲ ಎಂಬುದೂ ಮಗುವಿಗೆ ಅರಿವಾಗಬೇಕು. ದಂತವೈದ್ಯರೆಂದರೆ ನೋವು ಮಾಡುವವರಲ್ಲ, ನಗು ಅರಳಿಸುವವರು ಎಂಬ ಭಾವನೆ ಮಗುವಿಗೆ ಮೂಡಿದಾಗ ಭೇಟಿ ಸುಲಭ ಮತ್ತು ಚಿಕಿತ್ಸೆ ಫಲಕಾರಿ.

Follow Us:
Download App:
  • android
  • ios