ನಗದು ಚಲಾವಣೆಯು ಅಪನಗದೀಕರಣಕ್ಕೆ ಮುಂಚಿನ ಮಟ್ಟಕ್ಕೆ ತಲುಪಿದೆ. ಮಾರ್ಚ್ 23ರಂದು ನಗದು ಚಲಾವಣೆಯು 18.27 ಲಕ್ಷ ಕೋಟಿ ರು. ತಲುಪಿದೆ.
ಮುಂಬೈ: ನಗದು ಚಲಾವಣೆಯು ಅಪನಗದೀಕರಣಕ್ಕೆ ಮುಂಚಿನ ಮಟ್ಟಕ್ಕೆ ತಲುಪಿದೆ. ಮಾರ್ಚ್ 23ರಂದು ನಗದು ಚಲಾವಣೆಯು 18.27 ಲಕ್ಷ ಕೋಟಿ ರು. ತಲುಪಿದೆ. 2016 ರ ನವೆಂಬರ್ 8ರಂದು 500 ರು. ಹಾಗೂ 1000 ರು. ನೋಟುಗಳ ಚಲಾವಣೆಯನ್ನು ನಿಷೇಧಿಸಲಾಗಿತ್ತು. ಆ ಬಳಿಕ ನಗದಿಗಾಗಿ ಹಾಹಾಕಾರ ಉಂಟಾಗಿ ದೇಶಾದ್ಯಂತ ಸಮಸ್ಯೆ ತಲೆದೋರಿತ್ತು.
2000 ರು. ಹಾಗೂ 500 ರು. ಹೊಸ ನೋಟುಗಳು ಬಿಡುಗಡೆಯಾದರೂ ಅಷ್ಟಾಗಿ ಪರಿಸ್ಥಿತಿ ಸುಧಾರಿ ಸಿರಲಿಲ್ಲ. ಈಗಲೂ ಇದ್ದ ಎಟಿಎಂಗಳು ಬಾಗಿಲು ಮುಚ್ಚಿ ನಗದಿಗಾಗಿ ತತ್ವಾರ ಇದ್ದೇ ಇದೆ.
ಆದಾಗ್ಯೂ ಮಾರ್ಚ್ 23ರಂದು ನಗದು ಚಲಾವಣೆ ಮಟ್ಟ 18.27 ಲಕ್ಷ ಕೋಟಿ ರು. ತಲುಪಿದೆ. ಇಷ್ಟೊಂದು ಸ್ತರಕ್ಕೆ ತಲುಪಲು 15 ತಿಂಗಳೇ ಬೇಕಾಯಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳು ಹೇಳಿವೆ. ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ 1.2 ಲಕ್ಷ ಕೋಟಿ ರು. ಚಲಾವಣೆಗೆ ಬಂದಿದೆ. ಕಳೆದ ವರ್ಷ ಇದೇ ದಿನಕ್ಕೆ ನಗದು ಚಲಾವಣೆ ಮಟ್ಟವು 13.35 ಲಕ್ಷ ಕೋಟಿ ರುಪಾಯಿ ಇತ್ತು. ಅಪನಗದೀಕರಣಕ್ಕೆ ಮುನ್ನ 17.97 ಲಕ್ಷ ಕೋಟಿ ರು.ನಷ್ಟು ನಗದು ಚಲಾವಣೆ ನಡೆಯುತ್ತಿತ್ತು.
ಜನರ ಬಳಿಯ ಹಣ (ಬ್ಯಾಂಕ್‌ಗಳಲ್ಲಿದ್ದ ಹಣ ಹೊರತುಪಡಿಸಿ) ಮಾರ್ಚ್ 16ರ ಅಂಕಿ-ಸಂಖ್ಯೆಗಳ ಪ್ರಕಾರ 17.52 ಲಕ್ಷ ಕೋಟಿ ರು. ಇದೆ. ಕಳೆದ ವರ್ಷ ಇದೇ ಅವಧಿಗೆ ಇದರ ಪ್ರಮಾಣ 12.64 ಲಕ್ಷ ಕೋಟಿ ರು. ಇತ್ತು. ಮಾರ್ಚ್ 23ರ ವೇಳೆಗೆ ಈತನಕ ಆರ್‌ಬಿಐ 18.02 ಲಕ್ಷ ಕೋಟಿ ರು. ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡಿದೆ. ಪ್ರತಿ ವಾರ ಶೇ.0.6ರಷ್ಟು ಹೆಚ್ಚಳದೊಂದಿಗೆ ವ್ಯವಸ್ಥೆಗೆ ಆರ್‌ಬಿಐ ಹಣವನ್ನು ಹರಿಬಿಡುತ್ತಿದೆ. ಇಷ್ಟೊಂದು ಪ್ರಮಾಣದ ಹಣದ ಹರಿವು ಡಿಜಿಟಲ್ ವಹಿವಾಟು ಉತ್ತೇಜಿಸುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆ ಎಂದೇ ಭಾವಿಸಲಾಗಿದೆ.
