ನವದೆಹಲಿ(ನ.2): ರಾಷ್ಟ್ರ ರಾಜಧಾನಿ ನವದೆಹಲಿಯ ಟ್ರಾಫಿಕ್ ಪೊಲೀಸರು, ಪೊದೆಯಲ್ಲಿ ಎಸೆಯಲಾಗಿದ್ದ ನವಜಾತ ಶಿಶುವೊಂದನ್ನು ರಕ್ಷಿಸಿರುವ ಘಟನೆ ನಡೆದಿದೆ.

ಇಲ್ಲಿನ ಆಫ್ರಿಕಾ ರೆವಿನ್ಯೂ ರೋಡ್ ನಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೇದೆ ಅನಿಲ್ ಹಾಗೂ ಅಮರ್ ಸಿಂಗ್ ಪೊದೆಯಿಂದ ಮಗು ಅಳುತ್ತಿರುವ ಶಬ್ದ ಕೇಳಿದ್ದರು.

ಕೂಡಲೇ ಪೊದೆ ಸಮೀಪ ತೆರಳಿದ ಇಬ್ಬರೂ ಪೇದೆಗಳು ನವಜಾತ ಹೆಣ್ಣು ಶಿಶುವನ್ನು ಯಾರೋ ಅನಾಮಿಕರು ಬಿಟ್ಟು ಹೋಗಿದ್ದನ್ನು ಗಮನಿಸಿದರು. ಅನಿಲ್ ಮತ್ತು ಅಮರ್ ಸಿಂಗ್ ಪೊದೆ ಸಮೀಪ ತಲುಪುವ ಹೊತ್ತಿಗಾಗಲೇ ಬೀದಿ ನಾಯಿಗಳು ಶಿಶುವನ್ನು ಸುತ್ತುವರೆದಿದ್ದವು ಎನ್ನಲಾಗಿದೆ.

ಸದ್ಯ ಮಗುವನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಮಗು ಸುರಕ್ಷಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.