* ರೈತರು ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಾಕಿದ್ದರಿಂದ ಮಾಲಿನ್ಯ ಹೆಚ್ಚಳ* ದಟ್ಟ ಹೊಗೆಯಿಂದಾಗಿ ಜನರಿಗೆ ಉಸಿರಾಡಲೂ ಸಂಕಷ್ಟ
ನವದೆಹಲಿ: ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ರೈತರು ಬೆಳೆ ಕೊಯ್ಲಿನ ನಂತರ ಉಳಿಯುವ ತ್ಯಾಜ್ಯವನ್ನು ಸುಡಲು ಆರಂಭಿಸುವುದರಿಂದ ಹಾಗೂ ಅದರಿಂದ ಸೃಷ್ಟಿಯಾಗಿರುವ ಹೊಗೆ ಹಾಗೂ ವಾತಾವರಣದಲ್ಲಿನ ಮಂಜು ಸೇರಿಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಸಿರಾಡಲೂ ಕಷ್ಟಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ‘ಗ್ಯಾಸ್ ಚೇಂಬರ್’ನ ಅನುಭವ ದೆಹಲಿಗರಿಗೆ ಆಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿದೆ. ಮತ್ತೊಂದೆಡೆ, ಪಾರ್ಕಿಂಗ್ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಿ, ಮೆಟ್ರೋ ಪ್ರಯಾಣ ದರಗಳನ್ನು ಕಡಿತಗೊಳಿಸುವ ಪ್ರಕಟಣೆಗಳನ್ನೂ ಮಾಡಲಾಗಿದೆ. ಹೊಗೆಮಿಶ್ರಿತ ಮಂಜು ವ್ಯಾಪಕವಾಗಿ ಹಬ್ಬಿರುವುದರಿಂದ ದೃಷ್ಟಿ ಗೋಚರತೆ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ವಿಮಾನ ಹಾಗೂ ರೈಲುಗಳ ಸಂಚಾರ ಅಸ್ತವ್ಯಸ್ತವಾಗಿದೆ. ಮನೆಗಳು ಹಾಗೂ ಭೂಗರ್ಭದಾಳದಲ್ಲಿರುವ ಮೆಟ್ರೋ ನಿಲ್ದಾಣಗಳಿಗೂ ಈ ಹೊಗೆ ಮಂಜು ನುಸುಳಿರುವುದರಿಂದ ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ರಸ್ತೆಗಿಳಿದವರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದೆ.
ವಾಯುಗುಣಮಟ್ಟ ಪ್ರಮಾಣ ಭಾರಿ ಕುಸಿತ ಕಂಡಿದೆ. 500 ಅಂಕಗಳ ಮಾಪನ ಪಟ್ಟಿಯಲ್ಲಿ ಗುಣಮಟ್ಟ 448ಕ್ಕೆ ಏರಿದೆ. ದೆಹಲಿಯಲ್ಲಿ ದೀಪಾವಳಿ ಸಂದದರ್ಭದಲ್ಲಿ ವ್ಯಾಪಕವಾಗಿ ಪಟಾಕಿ ಸಿಡಿಸಿದ್ದರಿಂದ ಇದೇ ರೀತಿ ವಾಯುಗುಣ ಮಟ್ಟ ಹಾಳಾಗಿತ್ತು. ಪ್ರತಿ ವರ್ಷ ದೆಹಲಿಯಲ್ಲಿ ಹೆಚ್ಚೂ ಕಡಿಮೆ ಇದೇ ರೀತಿಯ ವಾತಾವರಣ ಕಂಡುಬರುತ್ತಿದೆ.
